ADVERTISEMENT

ರಾಜ್ಯ: 175ಕ್ಕೇರಿದ ಕೋವಿಡ್‌ ಪೀಡಿತರ ಸಂಖ್ಯೆ

25 ಮಂದಿ ಗುಣಮುಖ: ಒಂದೇ ದಿನ 12 ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 20:00 IST
Last Updated 7 ಏಪ್ರಿಲ್ 2020, 20:00 IST
   
""

ಬೆಂಗಳೂರು:ರಾಜ್ಯದಲ್ಲಿ ಮಂಗಳವಾರ ಒಂದೇ ದಿನ ಹೊಸದಾಗಿ 12 ಕೋವಿಡ್‌–19 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 175ಕ್ಕೆ ತಲುಪಿದೆ. ಈವರೆಗೆ 25 ಮಂದಿ ಚಿಕಿತ್ಸೆಯಿಂದ ಚೇತರಿಕೆಯಾಗಿ ಆಸ್ಪತ್ರೆಗಳಿಂದ ಮನೆಗೆ ಮರಳಿದ್ದಾರೆ.

ಮಂಡ್ಯದಲ್ಲಿ 3, ಬೆಂಗಳೂರಿನಲ್ಲಿ 3, ಬಾಗಲಕೋಟೆಯಲ್ಲಿ 2, ಕಲಬುರ್ಗಿಯಲ್ಲಿ 2 ಹಾಗೂ ಬೆಂಗಳೂರು ಗ್ರಾಮಾಂತರ ಮತ್ತು ಗದಗದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ನಾಲ್ಕು ಮಂದಿದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್ ಜಮಾತ್ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಅಲ್ಲಿಗೆ ಹೋಗಿ ಬಂದವರಲ್ಲಿ 27 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ.

ಗದಗದ 80 ವರ್ಷದ ವೃದ್ಧೆ ಹಾಗೂ ಕಲಬುರ್ಗಿಯ 75 ವರ್ಷದ ಪುರುಷ ಯಾವುದೇ ವಿದೇಶ ಪ್ರಯಾಣದ ಇತಿಹಾಸ ಹೊಂದಿರುವುದಿಲ್ಲ. ಅದೇ ರೀತಿ, ರೋಗಿಗಳೊಂದಿಗೂ ನೇರ ಸಂಪರ್ಕ ಹೊಂದಿರಲಿಲ್ಲ. ಆದರೆ, ಅವರಿಗೆ ಉಸಿರಾಟದ ಸಮಸ್ಯೆಗಳು ಇದ್ದವು ಎನ್ನುವುದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದು ಬಂದಿದ್ದು, ಅವರ ಪ್ರಯಾಣದ ಇತಿಹಾಸ ಕಲೆಹಾಕಲಾಗುತ್ತಿದೆ.

ADVERTISEMENT

32 ವರ್ಷ, 36 ವರ್ಷ ಹಾಗೂ 65 ವರ್ಷದ ಮಂಡ್ಯದ ವ್ಯಕ್ತಿಗಳುಮೈಸೂರಿನ ಕೋವಿಡ್‌–19 ರೋಗಿಗಳೊಂದಿಗಿನ ನೇರ ಸಂಪರ್ಕ ಹೊಂದಿದ್ದರು. ಕಲಬುರ್ಗಿಯ 60 ವರ್ಷದ (124ನೇ ರೋಗಿ) ಮಹಿಳೆಯ ಸೊಸೆ ಹಾಗೂ ಬಾಗಲಕೋಟೆಯ 70 ವರ್ಷದ (125ನೇ ರೋಗಿ) ವೃದ್ಧನ ಪಕ್ಕದ ಮನೆಯ 41 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 146 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ 18 ಜಿಲ್ಲೆಗಳಲ್ಲಿ ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ.

43 ಮಂದಿಯನ್ನು ಸೋಂಕು ಶಂಕೆಯ ಹಿನ್ನೆಲೆಯಲ್ಲಿ ಮಂಗಳವಾರ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳಲಾಗಿದೆ. 617 ಮಂದಿಯ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಸಂಗ್ರಹಿಸಲಾಗಿದೆ. 1,677 ಮಂದಿಯನ್ನು ಕ್ವಾರಂಟೈನ್‌ ಕೇಂದ್ರದಲ್ಲಿ ಪ್ರತ್ಯೇಕಿಸಲಾಗಿದೆ.ಈವರೆಗೆ ಸೋಂಕಿಗೆ ನಾಲ್ವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.