ADVERTISEMENT

ಗ್ರಾಮ ವಾಸ್ತವ್ಯ ನಾಟಕ ಬಿಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ 

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 11:16 IST
Last Updated 8 ಜೂನ್ 2019, 11:16 IST
   

ವಿಜಯಪುರ: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿ, ಈಗ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿರುವುದು ನಾಟಕವಾಗಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲೆಗಳಲ್ಲಿ ಮಲಗಿದರೆ ಊರು ಉದ್ಧಾರವಾಗುವುದಿಲ್ಲ. ಈ ಹಿಂದೆ ನೀವು ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಗ್ರಾಮ ವಾಸ್ತವ್ಯ ನಾಟಕ ಬಿಟ್ಟು, ಅಭಿವೃದ್ಧಿಯತ್ತ ಗಮನಹರಿಸಬೇಕು’ ಎಂದು ಕುಟುಕಿದರು.

‘ಇಡೀ ರಾಜ್ಯ ಭೀಕರ ಬರಕ್ಕೆ ತುತ್ತಾಗಿದೆ. ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಬೇಕು. ವಿಧಾನಸೌಧದಲ್ಲಿ ಕುಳಿತು ಆಡಳಿತ ನಡೆಸಬೇಕು. ಬರ ವೀಕ್ಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಮೋದಿ ಸಂಪುಟದಲ್ಲಿ ಲಿಂಗಾಯತ ಸಂಸದರಿಗೆ ಅನ್ಯಾಯವಾಗಿದೆ ಎಂಬ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಸರಿಯಾಗಿದೆ. ಲಿಂಗಾಯತ, ದಲಿತರಿಗೂ ಸಚಿವ ಸ್ಥಾನ ನೀಡಬೇಕು ಎಂದು ನಾನು ಕೂಡ ಒತ್ತಾಯಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಂದಾಲ್‌ಗೆ ಭೂಮಿ ಕೈಬಿಡಿ: ‘ಜಿಂದಾಲ್‌ಗೆ ಭೂಮಿ ಕೊಡುವುದರ ಹಿಂದೆ ಸಾವಿರಾರು ಕೋಟಿ ರೂಪಾಯಿ ಡೀಲ್ ನಡೆದಿರುವ ಶಂಕೆ ಇದೆ. ಆದ್ದರಿಂದ ಜಿಂದಾಲ್‌ಗೆ ಭೂಮಿ ಹಸ್ತಾಂತರಿಸುವ ನಿರ್ಧಾರವನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.