ADVERTISEMENT

ಚುನಾವಣೆ ಫಲಿತಾಂಶ ಬಳಿಕ ಮೈತ್ರಿ ಸರ್ಕಾರಕ್ಕೆ ಇಕ್ಕಟ್ಟು; ಶಾಸಕ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಮೇ 2019, 8:49 IST
Last Updated 12 ಮೇ 2019, 8:49 IST
   

ತುಮಕೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಒಪ್ಪಂದದ ಘಟ್ಟ ಲೋಕಸಭಾ ಚುನಾವಣೆವರೆಗೂ ಮಾತ್ರ. ಚುನಾವಣೆ ಫಲಿತಾಂಶದ ಬಳಿಕ ಯಾವ ಹೋರಿಗಳು( ಶಾಸಕರು) ಎಲ್ಲೆಲ್ಲಿ ಹೋಗುತ್ತವೊ ಗೊತ್ತಿಲ್ಲ. ಮೈತ್ರಿ ಶಾಸಕರಲ್ಲಿ ಅಸಂತುಷ್ಟಿಯಂತೂ ಬಹಳ ಇದೆ’ ಎಂದು ಶಾಸಕ ಜೆ.ಸಿ ಮಾಧುಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆವರೆಗಿನ ಒಪ್ಪಂದದ ಘಟ್ಟ ಮುಗಿದಿದೆ. ಇದೆಲ್ಲವೂ ಗೊತ್ತಿರುವ ಸಂಗತಿಯೇ ಆಗಿದೆ. ಚುನಾವಣೆಯವರೆಗೂ ಹೇಗೊ ಸರ್ಕಾರ ನಡೆಸಿಕೊಂಡು ಬಂದರು. ಈಗ ಇಕ್ಕಟ್ಟಿನ ಸ್ಥಿತಿ ಎದುರಿಸುವ ಪರಿಸ್ಥಿತಿಗೆ ಜೆಡಿಎಸ್, ಕಾಂಗ್ರೆಸ್ ಬಂದಿವೆ’ ಎಂದರು.

‘104 ಸ್ಥಾನಗಳನ್ನು ಬಿಜೆಪಿ ಗೆದ್ದು ಅಧಿಕಾರದಿಂದ ದೂರ ಉಳಿಯುತ್ತದೆ. 37 ಶಾಸಕರನ್ನು ಹೊಂದಿರುವವರು ಅಧಿಕಾರ ನಡೆಸುತ್ತಾರೆ ಎಂದರೆ ಸಹಿಸಿಕೊಳ್ಳುವುದು ಹೇಗೆ ಸಾಧ್ಯ? ಯಡಿಯೂರಪ್ಪ ಅವರು ಬಿಜೆಪಿಗೆ ಜನಮತ ಇದೆ ಎಂಬ ಹೇಳಿಕೆಯಲ್ಲಿ ಏನು ತಪ್ಪಿದೆ’ ಎಂದು ಪ್ರಶ್ನಿಸಿದರು.

ADVERTISEMENT

ದೇವೇಗೌಡರ ಕುಟುಂಬದವರ ಬಗ್ಗೆ ಮಾತನಾಡಿದವರನ್ನು ಗುರಿಯಾಗಿಸಿ(ಟಾರ್ಗೆಟ್) ಕ್ರಮಕ್ಕೆ ಮುಂದಾಗುತ್ತಿದ್ದಾರಂತಲ್ಲ. ನಿಮ್ಮ ವಿರುದ್ಧವೂ ಅಂತಹ ಪ್ರಯತ್ನ ನಡೆದಿದೆಯಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ‘ಬಹಳ ಸಂತೋಷ. ವಿಶ್ವಮಿತ್ರನನ್ನು ನಾನು ಬಹಳ ಮೆಚ್ಚಿಕೊಂಡಿರುವ ವ್ಯಕ್ತಿ. ವಿಶ್ವಾಮಿತ್ರ ಇಲ್ಲದೇ ಇದ್ದರೆ ಹರಿಶ್ಚಂದ್ರ ಕಾವ್ಯ ಬರಲು ಸಾಧ್ಯವೇ ಆಗುತ್ತಿರಲಿಲ್ಲ. ತನಿಖೆ ಮಾಡಿಸುವಂಥದ್ದು ಏನಿದೆ. ದೇವೇಗೌಡರು ತನಿಖೆ ಮಾಡಿಸಿ ದೇಶಕ್ಕೆ ಹೇಳಿಬಿಟ್ಟರೆ ಜನರಿಗೆ ನಾನೇನು ಎಂಬುದು ಹೇಳುವುದು ತಪ್ಪುತ್ತದೆ ಎಂದರು.

ರಾಜಕಾರಣದಲ್ಲಿ ಮತ ಹಾಕುವ ಮತದಾರರಿಗೆ ಹೆದರಿಕೊಂಡು ಬದುಕಬೇಕೆ ಹೊರತು ದೊಡ್ಡ ಲೀಡರ್‌ಗಳಿಗೆ ಹೆದರಿ ಬದುಕುವುದಲ್ಲ. ದೇವೇಗೌಡರ ಕುಟುಂಬಕ್ಕೆ ಹೆದರಿ ರಾಜಕಾರಣ ಮಾಡಬೇಕಾದ ಸ್ಥಿತಿ ಬಂದರೆ ರಾಜಕಾರಣ ಬಿಟ್ಟು ಹೋಗುತ್ತೇವೆ ಎಂದು ಹೇಳಿದರು.

ಮುಖ್ಯಮಂತ್ರಿ ವಿಶ್ರಾಂತಿ ತೆಗೆದುಕೊಳ್ಳುವುದರ ಬಗ್ಗೆ ನಾನೇನೂ ಹೇಳುವುದಿಲ್ಲ. ಅವರ ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಚುನಾವಣೆಯಲ್ಲಿ ಅವರು ದಣಿದಿದ್ದಾರೆ. ವಿಶ್ರಾಂತಿ ಪಡೆದು ಬಂದು ಚುರುಕಾಗಿ ಕೆಲಸ ಮಾಡಲಿ ಎಂದು ಬಯಸುತ್ತೇನೆ ಎಂದು ಹೇಳಿದರು.

ನಿಮ್ಹಾನ್ಸ್‌ಗೆ ಇಬ್ಬರು ದಾಖಲು
ತುಮಕೂರು:
ಶನಿವಾರ ಸಂಜೆ ಕೆ.ಬಿ.ಕ್ರಾಸ್ ಬಳಿ ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದು ಗಾಯಗೊಂಡವರಲ್ಲಿ ಇಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಅಧೀಕ್ಷಕ ಡಾ. ವೀರಭದ್ರಯ್ಯ ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಲು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಭೇಟಿ ನೀಡಿದ ವೇಳೆ ಮಾಹಿತಿ ನೀಡಿದರು.

ಮಗು ಮತ್ತು ತಾಯಿಗೆ ತಲೆಗೆ ಪೆಟ್ಟಾಗಿತ್ತು. ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ನಿಮ್ಹಾನ್ಸ್‌ಗೆ ಕಳಿಸಲಾಗಿದೆ. ಇನ್ನುಳಿದ ಗಾಯಾಳುಗಳಲ್ಲಿ 9 ಮಂದಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.