ADVERTISEMENT

ಹೆಚ್ಚುವರಿ ರಾಜಧನ ವಸೂಲಿ ಕಾನೂನುಬಾಹಿರ ಕ್ರಮ: ಸ್ಟೋನ್‌ ಕ್ರಷರ್ ಮಾಲೀಕರ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 17:24 IST
Last Updated 24 ಫೆಬ್ರುವರಿ 2026, 17:24 IST
   

ಬೆಂಗಳೂರು: ರಾಜ್ಯ ಸರ್ಕಾರ ಗಣಿ ಮಾಲೀಕರಿಂದ ಹೆಚ್ಚುವರಿ ರಾಜಧನ ವಸೂಲಿ ಮಾಡುತ್ತಿರುವುದು ಖಂಡನೀಯ. ಸಚಿವ ಸಂಪುಟ ಉಪ ಸಮಿತಿಯ ತೀರ್ಮಾನದಂತೆ ಒಂದು ಬಾರಿ ಇತ್ಯರ್ಥ (ಓಟಿಎಸ್‌) ನಿರ್ಧಾರದ ಮೂಲಕ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ದಂಡ ವಿಧಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್‌ ಕ್ರಷರ್ ಮಾಲೀಕರ ಒಕ್ಕೂಟ ಆರೋಪಿಸಿದೆ. 

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಡಿ.ಸಿದ್ಧರಾಜು, ‘ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಲ್ಲು ಗಣಿಗಾರಿಕೆ ಬಂದ್‌ ಮಾಡಲಾಗುತ್ತದೆ. ಸರ್ಕಾರಕ್ಕೆ ಈಗಾಗಲೇ ರಾಜಧನ ಸಂಪೂರ್ಣವಾಗಿ ಪಾವತಿಸಲಾಗಿದೆ. ಈಗ ಮತ್ತೆ ಗಣಿಗುತ್ತಿಗೆದಾರರಿಂದ ರಾಜಧನ ವಸೂಲಿ ಮಾಡಲು ಮುಂದಾಗಿರುವುದು ಕಾನೂನುಬಾಹಿರ ಕ್ರಮವಾಗಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಈಗಾಗಲೇ ಪಾವತಿಸಿಕೊಂಡು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದೇ ರಾಜಧನವನ್ನು ಮತ್ತೆ ಗಣಿಗುತ್ತಿಗೆದಾರರಿಂದ ವಸೂಲಿ ಮಾಡಲು ಮುಂದಾಗಿರುವುದು ಸರಿಯಲ್ಲ. ಕೆ.ಎಂ.ಎಂ.ಸಿ.ಆರ್–1994 ನಿಯಮಗಳು ಪ್ರಸ್ತುತ ಕಾನೂನುಬದ್ಧ ಗಣಿಗಾರಿಕೆ ಚಟುವಟಿಕೆಗಳಿಗೆ ಪೂರಕವಾಗಿಲ್ಲ. ಆದ್ದರಿಂದ ಸಮಗ್ರ ಹಾಗೂ ಸಮರ್ಪಕ ತಿದ್ದುಪಡಿ ಮಾಡಬೇಕು’ ಎಂದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.