ADVERTISEMENT

‘ಬಿಜೆಪಿಯ ಜನವಿರೋಧಿ ಕಾಯ್ದೆಗಳ ವಿರುದ್ಧ ಬೀದಿಗಿಳಿದು ಹೋರಾಟ’

ಬಿಜೆಪಿಯದ್ದು ದರಿದ್ರ ಸರ್ಕಾರ– ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 9:59 IST
Last Updated 10 ಜನವರಿ 2021, 9:59 IST
   

ಬೆಂಗಳೂರು: ‘ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಶೀಘ್ರದಲ್ಲೇ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸರ್ಕಾರದ ಐದು ಜನ ವಿರೋಧಿ ಕಾಯ್ದೆಗಳ ಬಗ್ಗೆ ಕಿರು ಪುಸ್ತಕಗಳನ್ನು ತಮ್ಮ ನಿವಾಸದಲ್ಲಿ ಭಾನುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಈ ವರ್ಷ ಸಂಘರ್ಷದ ವರ್ಷ. ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜ. 18ರವರೆಗೂ ಪಕ್ಷದ ಕಾರ್ಯಕ್ರಮ ಇದೆ. ನಂತರ ಪಕ್ಷದಲ್ಲಿ ವಲಯದಲ್ಲಿ ಚರ್ಚೆ ಮಾಡಿ, ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ. ಇದಕ್ಕಾಗಿ ಜೈಲಿಗೆ ಹೋಗುವುದಕ್ಕೂ ಸಿದ್ಧ’ ಎಂದು ಗುಡುಗಿದರು..

‘ಬಿಜೆಪಿ ಸರ್ಕಾರ ಐದು ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಸುಳ್ಳು ಯಾವುದು ಸತ್ಯ ಯಾವುದು ಎಂಬ ಅಂಶಗಳನ್ನು ಸೇರಿಸಿ ಪಕ್ಷ ಕಿರು ಪುಸ್ತಕ ಹೊರ ತಂದಿದ್ದೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ರೈತರೊಂದಿಗೆ ಕೃಷಿ ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ ಈ ಕಾಯ್ದೆಗಳ ಸರಿ -ತಪ್ಪುಗಳ ಬಗ್ಗೆ ಈ ಕಿರು ಹೊತ್ತಿಗೆಯಲ್ಲಿದೆ’ ಎಂದರು.

ADVERTISEMENT

‘ಎಪಿಎಂಸಿಯನ್ನು ಪೂರ್ತಿಯಾಗಿ ಮುಗಿಸಿಬಿಡಲು ಬಿಜೆಪಿ ಹೊರಟಿದೆ. ಭೂ ಸುಧಾರಣಾ ಕಾಯ್ದೆಯಲ್ಲಿ ಯಾರು ಬೇಕಾದರೂ ವ್ಯವಸಾಯ ಮಾಡಬಹುದು ಮತ್ತು ಭೂಮಿ ಖರೀದಿಸಬಹುದು ಎಂದು ಹೇಳುತ್ತಾರೆ. ದೇವರಾಜ ಅರಸು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೆ ಭೂಮಿ ಒಡೆಯ ಎಂದು ಮಾಡಿದರು. ಅದರಿಂದ ಸಾವಿರಾರು ಜನ ಭೂ ಮಾಲೀಕರಾದರು. ಈಗ ಇದಕ್ಕೆ ತಿದ್ದುಪಡಿ ಮಾಡಿದ್ದಾರೆ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಹೊಸ ಕಾಯ್ದೆಯಿಂದ ಅದಾನಿಯಂಥವರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು. ಇದರಿಂದ ಸಣ್ಣ ರೈತರು ತಮ್ಮ ಜಮೀನು ಮಾರಾಟ ಮಾಡಿ ನಂತರ ದೊಡ್ಡ ಕಂಪನಿಯ ಅಡಿಯಲ್ಲಿ ಕೆಲಸ ಮಾಡುವುದಕ್ಕೆ ಹೋಗುತ್ತಾರೆ. ಈಗ ಉಳ್ಳವನೇ ಭೂಮಿ ಒಡೆಯ ಎಂಬಂತಾಗಿದೆ. ಕೃಷಿ ಭೂಮಿ ರಿಯಲ್ ಎಸ್ಟೇಟ್, ಮೋಜು ಮಸ್ತಿಗೆ ಉಪಯೋಗವಾಗುತ್ತದೆ. ನಾನು ಕೃಷಿಕನಲ್ಲದವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರೇ 79 ಎ ಮತ್ತು ಬಿಗೆ ತಿದ್ದುಪಡಿ ತರಲು ಹೊರಟಿದ್ದರು ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

‘ಬಿಜೆಪಿಯ ತಂದಿರುವ ಹೊಸ ಕಾಯ್ದೆಗಳ ಬಗ್ಗೆ ಕಾಂಗ್ರೆಸ್ ನಿಲುವೇನು ಎನ್ನುವುದು ಈ ಪುಸ್ತಕದಲ್ಲಿದೆ. ಸುಗ್ರೀವಾಜ್ಞೆ ತರುವುದು ಅಗತ್ಯ ಮತ್ತು ಅನಿವಾರ್ಯತೆ ಇದ್ದಾಗ ಮಾತ್ರ. ಆದರೆ, ಅಗತ್ಯ ಇಲ್ಲದಿದ್ದರೂ ಬಿಜೆಪಿ ಸರ್ಕಾರ ಎಲ್ಲ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿದೆ. ಈ ಮೂಲಕ, ರೈತರನ್ನು ನಾಶ ಮಾಡಲು ಸರ್ಕಾರ ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

‘ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಸಗಣಿ ಎತ್ತುದವರು, ಗಂಜಲ ಎತ್ತದವರು ಹಸುಗಳ ಬಗ್ಗೆ ಮಾತನಾಡ್ತಾರೆ. ಹಾಗಾದರೆ, ವಯಸ್ಸಾದ ಹಸುಗಳನ್ನು ಏನು ಮಾಡಬೇಕು ಹೇಳಿ. ಎತ್ತುಗಳು ಪ್ರಯೋಜನಕ್ಕೆ ಬರಲ್ಲ ಎಂದರೆ ಅವುಗಳನ್ನು ಏನು ಮಾಡಬೇಕು. ಹಸುಗಳನ್ನು ಗೋ ಶಾಲೆಗೆ ಕೊಟ್ಟರೆ ನಾವೇ ದುಡ್ಡು ಕೊಡಬೇಕಂತೆ. ಒಂದು ಹಸು 7 ಕೆಜಿ ಮೇವು ಸೇವಿಸುತ್ತದೆ. ಅದಕ್ಕೆ ಪ್ರತಿದಿನ ₹ 100 ಆಗಲಿದೆ. ಗೋಹತ್ಯೆ ನಿಷೇಧಿಸುವುದಾದರೆ ಇಡೀ ದೇಶದಲ್ಲಿ ನಿಷೇಧಿಸಿ. ದೇಶದಲ್ಲಿ ಗೋ ಮಾಂಸ ರಫ್ತು, ಆಮದು ಮಾಡುವುದನ್ನು ಮೊದಲು ನಿಲ್ಲಿಸಿ’ ಎಂದರು.

‘ಬಿಜೆಪಿಯವರದ್ದು ದರಿದ್ರ ಸರ್ಕಾರ. ನಮ್ಮ ಹಳ್ಳಿಯಲ್ಲಿ 'ನೀನು ತಂದಾಕು ನಾನು‌ ಉಂಡಾಕ್ತೀನಿ' ಅನ್ನೋ ಜಾಯಮಾನ ಬಿಜೆಪಿಯವರದ್ದು. ಬಿಜೆಪಿ ಅವರೇ ಗೋಮಾಂಸವನ್ನು ರಪ್ತು ಮಾಡುವವರು. ಗೋ ಹತ್ಯೆ ನಿಷೇಧದಿಂದ ಹಳ್ಳಿಯ ರೈತರ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಚರ್ಮೋದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತದೆ. ನರೇಂದ್ರ ಮೋದಿ ಅವರು ಅಡುಗೆ ಅನಿಲ ಮತ್ತು ಪೆಟ್ರೋಲ್ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವ ಮೊದಲು ₹ 300 ರೂಪಾಯಿ ಅಡುಗೆ ಅನಿಲದ ದರ, ಈಗ ₹ 700 ಆಗಿದೆ’ ಎಂದು ಪ್ರಧಾನಿ ವಿರುದ್ಧವೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ನಾನು ಶಾದಿ ಭಾಗ್ಯ ಯೋಜನೆ ತಂದಾಗ ಯಡಿಯೂರಪ್ಪ ವಿರೋಧಿಸಿದರು. ಆದರೆ, ಈಗ ಬ್ರಾಹ್ಮಣರಿಗೆ ಕೊಡುತ್ತಿದ್ದಾರೆ. ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿಲ್ಲ. ಎಲ್ಲಾ ಬಡವರಿಗೆ ನೀಡಲಿ ಎಂದು ಹೇಳುತ್ತಿದ್ದೇನೆ’ ಎಂದೂ ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.