ಬೆಂಗಳೂರು: ‘ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ನಟ್ಟು– ಬೋಲ್ಟ್ ಟೈಟ್ ಮಾಡಿ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.
ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆ ಕುರಿತು ವಿಧಾನ ಪರಿಷತ್‌ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಕ್ರಿಮಿನಲ್‌ಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗಾಗಿ, ಕಾನೂನು ಕೈಗೆತ್ತಿಕೊಳ್ಳಲು ಹಿಂಜರಿಯುವುದಿಲ್ಲ’ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಪೊಲೀಸ್ ಇಲಾಖೆ ಮೇಲೆ ಭಯವೂ ಇಲ್ಲ. ವಿಶ್ವಾಸವೂ ಇಲ್ಲ ಎನ್ನುವ ಸ್ಥಿತಿ ರಾಜ್ಯದಲ್ಲಿದೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಗಲಭೆಗಳು ಉಂಟಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಸರ್ಕಾರದ ಮೃದು ನೀತಿಯೇ ಎಲ್ಲ ಘಟನೆಗಳಿಗೆ ಕಾರಣ. ಸರ್ಕಾರದ್ದು ಒಂದು ನೀತಿಯಾದರೆ, ಮಂತ್ರಿಗಳದ್ದು ಮತ್ತೊಂದು ನೀತಿ. ಪೊಲೀಸ್ ಅಧಿಕಾರಿಗಳು ಸಮರ್ಥರಿದ್ದಾರೆ. ಆದರೆ, ಸರ್ಕಾರದ ನಿಲುವು ಸ್ಪಷ್ಟವಿಲ್ಲ’ ಎಂದು ಬಿಜೆಪಿಯ ಎನ್. ರವಿಕುಮಾರ್ ದೂರಿದರು.
ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದ ಕೊನೆಯ ದಿನ ಸಿ.ಟಿ. ರವಿ ಅವರನ್ನು ಪೊಲೀಸರು ಬಂಧಿಸಿದ ನಂತರ ನಡೆಸಿಕೊಂಡ ರೀತಿಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಚರ್ಚೆಯ ವೇಳೆ ಪ್ರಸ್ತಾಪಿಸಿದರು.
ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ‘ಸಿ.ಟಿ. ರವಿ ಅವರನ್ನು ಪೊಲೀಸರು ನಡೆಸಿಕೊಂಡಿದ್ದ ರೀತಿ ತಪ್ಪು. ಹಾಗೆಂದು, ಕರ್ನಾಟಕವನ್ನು ಬಿಹಾರಕ್ಕೆ ಹೋಲಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಎಷ್ಟು ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂಬ ಮಾಹಿತಿಯನ್ನು ಗೃಹ ಸಚಿವರು ಸಭೆಗೆ ನೀಡಬೇಕು’ ಎಂದರು.
ಎಲ್ಲರಿಗೂ ಮಾತನಾಡಲು ಅವಕಾಶ ಕೊಡಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಅವಕಾಶ ನೀಡಲು ನಿರಾಕರಿಸಿದ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ‘ಚರ್ಚೆಗೆ ಎಷ್ಟು ಸಮಯ ಕೊಡಬೇಕು ಎನ್ನುವುದು ನಿಯಮಾವಳಿಯಲ್ಲಿದೆ. ಅದನ್ನು ಎಲ್ಲರೂ ಓದಬೇಕು’ ಎಂದು ಸಿಡಿಮಿಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.