ADVERTISEMENT

ಶಾಂತಿ ಭಂಗವಾದರೆ ತಕ್ಕ ಪಾಠ: ಮಹಾ ಸಚಿವರ ಬೆಳಗಾವಿ ಭೇಟಿಗೆ ಎಡಿಜಿಪಿ ಪ್ರತಿಕ್ರಿಯೆ

ಗಡಿ ವಿವಾದ: ಡಿ.3ರಂದು ಬೆಳಗಾವಿಯಲ್ಲಿ ಸಭೆ ನಡೆಸಲಿರುವ ಮಹಾರಾಷ್ಟ್ರದ ಸಚಿವರು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 20:10 IST
Last Updated 29 ನವೆಂಬರ್ 2022, 20:10 IST
ಅಲೋಕ್ ಕುಮಾರ್
ಅಲೋಕ್ ಕುಮಾರ್   

ಬೆಳಗಾವಿ: ‘ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಬೆಳಗಾವಿಗೆ ಯಾರು ಬಂದರೂ ತಕರಾರು ಇಲ್ಲ. ಏನಾದರೂ ತರಲೆ- ತಂಟೆ ಮಾಡಿದರೆ, ಶಾಂತಿ ಭಂಗ ಮಾಡಿದರೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಡಿಜಿಪಿ ಅಲೋಕ್‌ಕುಮಾರ್‌ ಎಚ್ಚರಿಸಿದರು.

ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ್‌ ದೇಸಾಯಿ ಅವರು, ಡಿಸೆಂಬರ್‌ 3ರಂದು ಬೆಳಗಾವಿಯಲ್ಲಿ ಗಡಿ ವಿವಾದದ ವಿಚಾರವಾಗಿ ಸಭೆ ನಡೆಸಲಿರುವ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ‘ಯಾರು ಬೇಕಾದರೂ ತಮ್ಮವರ ಮನೆಗೆ, ಮದುವೆಗೆ, ಊಟಕ್ಕೆ ಬಂದರೆ ನಾವು ಏನೂ ಮಾಡಲಾಗುವುದಿಲ್ಲ. ಶಾಂತಿ ಕದಡಿದರೆ ಎಂಇಎಸ್‌ ಪುಂಡರಾದರೂ ಸರಿ, ಯಾರಾದರೂ ಸರಿ, ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ನ.30ರಂದು ಗಡಿ ವಿವಾದದ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಚರ್ಚೆಗೆ ಬರಲಿದೆ. ಅಲ್ಲಿನ ತೀರ್ಪು ಏನು ಬರುತ್ತದೆ ಎಂಬುದನ್ನು ನೋಡಿಕೊಂಡು ಭದ್ರತೆಗೆ ಕ್ರಮ ವಹಿಸಲಾಗುವುದು’ ಎಂದರು.

ADVERTISEMENT

‘21 ಕಡೆ ಜಂಟಿ ಚೆಕ್‌ಪೋಸ್ಟ್‌’: ‘ಗಡಿ ತಂಟೆ ಕಾರಣದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಜಂಟಿ ಚೆಕ್‌ಪೋಸ್ಟ್‌ ತೆರೆದಿದ್ದೇವೆ. ಬೆಳಗಾವಿ ಗಡಿಯಲ್ಲಿ 21 ಚೆಕ್‌ಪೋಸ್ಟ್ ಈಗಾಗಲೇ ನಿರ್ಮಾಣ ಮಾಡಿದ್ದೇವೆ’ ಎಂದು ಎಡಿಜಿ‍ಪಿ ಅಲೋಕ್‌ ಕುಮಾರ್‌ ತಿಳಿಸಿದರು.

ಜಿಲ್ಲೆಯ ನಿಪ್ಪಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘400ಕ್ಕೂ ಅಧಿಕ ಕರ್ನಾಟಕ ಬಸ್‌ಗಳು, 176ಕ್ಕೂ ಹೆಚ್ಚು ಮಹಾರಾಷ್ಟ್ರದ ಬಸ್‌ಗಳು ಗಡಿಯಾಚೆಗೆ ಸಂಚರಿಸುತ್ತವೆ. ಅಲ್ಲಿ ನಮ್ಮ ವಾಹನಗಳಿಗೆ, ನಮ್ಮ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಮಹಾರಾಷ್ಟ್ರದ ಪೊಲೀಸರೊಂದಿಗೆ ಚರ್ಚೆ ಮಾಡಲಾಗುವುದು’ ಎಂದರು.

---

ಮಹಾರಾಷ್ಟ್ರದ ಸಚಿವರು ಬೆಳಗಾವಿಯಲ್ಲಿ ಸಭೆ ನಡೆಸುವ ಕುರಿತು ಅಧಿಕೃತವಾಗಿ ಹೇಳಿಲ್ಲ. ಆದರೂ ಕಾನೂನು ಸುವ್ಯವಸ್ಥೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇವೆ

- ನಿತೇಶ್‌ ಪಾಟೀಲ, ಜಿಲ್ಲಾಧಿಕಾರಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.