ಸಂಸತ್ ಭವನ
ನವದೆಹಲಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಉಪನಗರ ವರ್ತುಲ ರಸ್ತೆ (ಎಸ್‌ಟಿಆರ್‌ಆರ್) ಯೋಜನೆಯನ್ನು ಅನುಷ್ಠಾನಗೊಳಿಸುವ ಹಾಗೂ ಜಮೀನು ಕಳೆದುಕೊಂಡಿರುವ ರೈತರಿಗೆ ತ್ವರಿತವಾಗಿ ಪರಿಹಾರ ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಶೀಘ್ರ ಅನುಮೋದನೆ ನೀಡುವ ಸಾಧ್ಯತೆ ಇದೆ.
ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದರು. ಅಲ್ಲದೆ, ಹಲವು ಬಾರಿ ನವದೆಹಲಿಯಲ್ಲಿ ಇಬ್ಬರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ತ್ವರಿತವಾಗಿ ಪರಿಹಾರ ಬಿಡುಗಡೆ ಮಾಡಲು ಸಚಿವ ಸಂಪುಟದ ಅನುಮೋದನೆ ಕೋರುವ ಕುರಿತು ಗಡ್ಕರಿ ಅವರಿಗೆ ಡಿಸೆಂಬರ್‌ನಲ್ಲಿ ಪತ್ರ ಬರೆದಿದ್ದರು.
ಈ ಮನವಿಗೆ ಸ್ಪಂದಿಸಿ ಫೆಬ್ರುವರಿ 23ರಂದು ಪತ್ರ ಬರೆದಿರುವ ಗಡ್ಕರಿ, ‘ನಿಮ್ಮ ಮನವಿಯನ್ನು, ಅದರ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಭೂ ಪರಿಹಾರ ನೀಡುವ ಬಗ್ಗೆ ಸಂಪುಟದ ಅನುಮೋದನೆ ಅಗತ್ಯವಾಗಿದ್ದು, ಅದಕ್ಕಾಗಿ ತಮ್ಮ ಮನವಿ ಪತ್ರ ಹಾಗೂ ಅದಕ್ಕೆ ಸಂಬಂಧಿತ ಪ್ರಸ್ತಾವವನ್ನು ಪ್ರಧಾನಿಯವರ ಕಾರ್ಯಾಲಯಕ್ಕೆ ರವಾನಿಸಿದ್ದೇನೆ’ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕುಮಾರಸ್ವಾಮಿ, ‘ಯೋಜನೆಯು ಅನುಮೋದನೆಗಾಗಿ ಪರಿಗಣನೆಯಲ್ಲಿದೆ. ಯೋಜನೆಯ ಹೂಡಿಕೆಗೆ ಅನುಮೋದನೆ ನೀಡಿದ ನಂತರವೇ ಪರಿಹಾರ ವಿತರಣೆ ಪುನರಾರಂಭಿಸಬಹುದು ಎಂದು ಹೆದ್ದಾರಿ ಸಚಿವರು ಪತ್ರ ಮುಖೇನ ತಿಳಿಸಿದ್ದಾರೆ. ಹೀಗಾಗಿ ಜಮೀನು ಕಳೆದುಕೊಂಡಿರುವ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಹೆದ್ದಾರಿ 948ಎಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ತಾಲ್ಲೂಕಿನ ಓಬಳಾಪುರದಿಂದ ರಾಮನಗರ ತಾಲ್ಲೂಕಿನ ಕುಣಗಾಲುವರೆಗೆ ಹಾಗೂ ರಾಮನಗರದ ಕುಣಗಾಲುವಿನಿಂದ ಹೊಸೂರು ತಾಲ್ಲೂಕಿನ ಎಸ್. ಮುದುಗದಪಲ್ಲಿವರೆಗೆ ಉಪನಗರ ವರ್ತುಲ ರಸ್ತೆ ನಿರ್ಮಾಣ ಯೋಜನೆಯನ್ನು ಅನುಷ್ಠಾನಗೊಳಿಸುವ ಹಾಗೂ ರೈತರಿಗೆ ಭೂ ಪರಿಹಾರ ನೀಡುವ ಬಗ್ಗೆ ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದರು.
‘2021ರಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ, ಜಮೀನು ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ವಿತರಣೆ ಪೂರ್ಣಗೊಂಡಿಲ್ಲ, ಇದು ರೈತರಿಗೆ ತೀವ್ರ ತೊಂದರೆ ಉಂಟು ಮಾಡಿದೆ‘ ಎಂದೂ ಅವರು ತಿಳಿಸಿದ್ದರು.
‘2023ರವರೆಗೆ ಈ ಎರಡು ವಿಭಾಗಗಳಲ್ಲಿ ₹216.92 ಕೋಟಿ ಹಾಗೂ ₹52.70 ಕೋಟಿ ಭೂ ಪರಿಹಾರ ವಿತರಣೆ ಮಾಡಲಾಗಿದೆ ಎಂಬ ಅಂಶವನ್ನು ಗಡ್ಕರಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ’ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.