ADVERTISEMENT

ವಿದ್ಯಾರ್ಥಿನಿ ಕೊಲೆ ಪ್ರಕರಣ: ತೀವ್ರತೆ ಪಡೆದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 9:54 IST
Last Updated 25 ಏಪ್ರಿಲ್ 2019, 9:54 IST
   

ರಾಯಚೂರು: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಒತ್ತಾಯಿಸಿ ರಾಯಚೂರಿನಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳು ಗುರುವಾರ ತೀವ್ರತೆ ಪಡೆದಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಉದ್ವೇಗಕ್ಕೊಳಗಾದ ಕೆಲವು ದುಷ್ಕರ್ಮಿಗಳು ಪೊಲೀಸರ ಮೇಲೆ ಚಪ್ಪಲಿ ತೂರಿದರು. ಕಲ್ಲು, ನೀರಿನ ಪ್ಯಾಕೇಟ್‌ಗಳನ್ನು ಕೂಡಾ ತೂರಲಾಗಿದೆ.

ಇದರಿಂದ ಪೊಲೀಸರಿಗೆ ಸಣ್ಣ ಪ್ರಮಾಣದ ಗಾಯಗಳಾದವು. ಕೂಡಲೇ ಒಬ್ಬ ಆರೋಪಿಯನ್ನು ಪೊಲೀಸರು ಸೆರೆಹಿಡಿದು ಠಾಣೆಗೆ ಕರೆದೊಯ್ದರು.

ADVERTISEMENT

ತನಿಖೆ ಚುರುಕುಗೊಳಿಸಿ, ಮೃತ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ವಿಶ್ವಕರ್ಮ ಸಮಾಜದಿಂದ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಗೆ ಹಲವು ಸಂಘ–ಸಂಸ್ಥೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ನಗರದ ಮಾಣಿಕಪ್ರಭು ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರಣಿಗೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಕಲ್ಲುತೂರಾಟದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗುರು ವಿಶ್ವಕರ್ಮ ಅವರ ಕಣ್ಣಿಗೆ ಗಾಯವಾಗಿದೆ.

ವಿದ್ಯಾರ್ಥಿನಿ ಕೊಲೆ: ನಟ ಭುವನ, ನಟಿ ಹರ್ಷಿಕಾ ಪ್ರತಿಭಟನೆ
ರಾಯಚೂರುಜಿಲ್ಲಾ ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಚಿತ್ರನಟ ಭುವನ ಹಾಗೂ ಹರ್ಷಿಕಾ ಪೂಣಚ್ಚ ಪಾಲ್ಗೊಂಡಿದ್ದರು.

ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಈಚೆಗೆ ಸಾಂತ್ವನ ಹೇಳುವುದಕ್ಕೆ ರಾಯಚೂರಿಗೆ ಬಂದಿದ್ದ ಅವರು, ಪ್ರತಿಭಟನೆ ನಡೆಸುವ ದಿನದಂದು ಪಾಲ್ಗೊಳ್ಳುವುದಾಗಿ ಕುಟುಂಬದ ಸದಸ್ಯರಿಗೆ ಹೇಳಿ ಹೋಗಿದ್ದರು.

ಅದರಂತೆಯೇ, ಪ್ರತಿಭಟನೆಯಲ್ಲಿ ಪಾಲ್ಗೊಂಡು ತೆರೆದ ವಾಹನದಲ್ಲಿ ನಿಂತು ವಿದ್ಯಾರ್ಥಿನಿ ಸಾವಿನ ತನಿಖೆ ಚುರುಕು ಮಾಡುವಂತೆ ಒತ್ತಾಯಿಸಿದರು. ಇಂತಹ ಘಟನೆಗಳು ಮರುಕಳಿಸಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.