ADVERTISEMENT

ಉಕ್ರೇನ್‌ನಿಂದ ಮರಳಿದವರಿಗೆ 60 ಕಾಲೇಜುಗಳಲ್ಲಿ ಕಲಿಕೆಗೆ ಅವಕಾಶ: ಡಾ.ಕೆ. ಸುಧಾಕರ್

ತವರಿಗೆ ಮರಳಿರುವ ಉಕ್ರೇನ್ ವೈದ್ಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಮಿತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 19:32 IST
Last Updated 21 ಮಾರ್ಚ್ 2022, 19:32 IST
ಡಾ.ಕೆ. ಸುಧಾಕರ್‌
ಡಾ.ಕೆ. ಸುಧಾಕರ್‌   

ಬೆಂಗಳೂರು: ಯುದ್ಧಪೀಡಿತ ಉಕ್ರೇನ್‌ನಿಂದ ಹಿಂದಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಜ್ಯದ 60 ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲೇ ಕಲಿಕೆ ಮುಂದುವರಿಸಲು ಅವಕಾಶ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕಾಗಿ ಉನ್ನತಮಟ್ಟದ ಸಮಿತಿ ನೇಮಕಕ್ಕೂ ನಿರ್ಧರಿಸಲಾಗಿದೆ.

ಉಕ್ರೇನ್‌ನಿಂದ ಹಿಂದಿರುಗಿರುವ ವಿದ್ಯಾರ್ಥಿಗಳ ಜತೆ ಸೋಮವಾರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಈ ವಿಷಯ ಪ್ರಕಟಿಸಿದರು.

‘ಉಕ್ರೇನ್‌ನಿಂದ 700 ವೈದ್ಯಕೀಯ ವಿದ್ಯಾರ್ಥಿಗಳು ರಾಜ್ಯಕ್ಕೆ ಹಿಂದಿರುಗಿದ್ದಾರೆ. ಅವರ ಶೈಕ್ಷಣಿಕ ಭವಿಷ್ಯ ರೂಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದರು. ವಿದ್ಯಾರ್ಥಿಗಳ ಜತೆ ಚರ್ಚಿಸಿದ ಬಳಿಕ ತಾತ್ಕಾಲಿಕ ಕ್ರಮವಾಗಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ’ ಎಂದರು.

ADVERTISEMENT

ರಾಜ್ಯದ 60 ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳು ಕಲಿಕೆ ಮುಂದುವರಿಸಲು ಅವಕಾಶ ಕಲ್ಪಿಸಲಾಗುವುದು. ಅವರು ಈಗ ವ್ಯಾಸಂಗ ಮಾಡುತ್ತಿರುವ ತರಗತಿಗಳಲ್ಲೇ ಕಲಿಕೆ ಮುಂದುವರಿಸಬಹುದು. ಆದರೆ, ಈ ವಿದ್ಯಾರ್ಥಿಗಳು ಅಧಿಕೃತವಾಗಿ ಈ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಉಕ್ರೇನ್‌ನಿಂದ ಹಿಂದಿರುಗಿರುವ ವಿದ್ಯಾರ್ಥಿಗಳು ರಾಜ್ಯದ ವೈದ್ಯಕೀಯ ಶಿಕ್ಷಣ ಕಾಲೇಜುಗಳಿಗೆ ಯಾವುದೇ ಶುಲ್ಕವನ್ನೂ ಪಾವತಿಸಬೇಕಿಲ್ಲ ಎಂದು ತಿಳಿಸಿದರು.

ಉನ್ನತಮಟ್ಟದ ಸಮಿತಿ ನೇಮಕ: ಈ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸುವ ಕುರಿತು ಅಧ್ಯಯನ ನಡೆಸಿ, ವರದಿ ನೀಡಲು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ನೇಮಿಸಲಾಗುವುದು. ಇಲಾಖೆಯ ನಿರ್ದೇಶಕರು, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು, ಕೆಲವು ವೈದ್ಯಕೀಯ ಕಾಲೇಜುಗಳ ಡೀನ್‌ಗಳು ಸಮಿತಿಯಲ್ಲಿರುತ್ತಾರೆ ಎಂದು ಸುಧಾಕರ್‌ ಹೇಳಿದರು.

ಈ ವಿದ್ಯಾರ್ಥಿಗಳಿಗೆ ರಾಜ್ಯದ ವೈದ್ಯಕೀಯ ಶಿಕ್ಷಣಕಾಲೇಜುಗಳಲ್ಲಿಕಲಿಕೆಗೆಅವಕಾಶ ನೀಡಲು ಉನ್ನತ ಸಮಿತಿ ನಿಯಮಗಳನ್ನು ರೂಪಿಸಲಿದೆ. ಅದರ ಆಧಾರದಲ್ಲೇ ಕ್ರಮ ಜರುಗಿಸಲಾಗುವುದು. ವಿದ್ಯಾರ್ಥಿಗಳ ಸ್ವಂತ ಜಿಲ್ಲೆ ಅಥವಾ ನೆರೆಯ ಜಿಲ್ಲೆಗಳಲ್ಲೇಕಲಿಕೆಗೆಅವಕಾಶ ಕೊಡಲಾಗುವುದು ಎಂದರು.

ಸಮಿತಿ ನೀಡುವ ವರದಿ ಆಧರಿಸಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಮಂಡಳಿಗೆ ಮನವಿ ಸಲ್ಲಿಸಲಾಗುವುದು. ಅವರು ಅಂತಿಮ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದರು.

ಉಕ್ರೇನ್‌ನಿಂದಮರಳಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗದಂತೆ ತಡೆಯುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದಾರೆ. ಕಾನೂನು ಮತ್ತು ಶೈಕ್ಷಣಿಕ ಚೌಕಟ್ಟಿನಲ್ಲಿ ಇರುವ ಅವಕಾಶಗಳನ್ನು ಆಧರಿಸಿ ವಿದ್ಯಾರ್ಥಿಗಳಿಗೆ ನೆರವು ಒದಗಿಸಲಾಗುವುದು ಎಂದು ಹೇಳಿದರು.

‘ಈ ವಿದ್ಯಾರ್ಥಿಗಳು ದೇಶದಲ್ಲಿ ವೈದ್ಯಕೀಯ ವೃತ್ತಿ ನಡೆಸಲು ಅವಕಾಶ ನೀಡಲು ವಿಶೇಷ ಪರೀಕ್ಷೆ ನಡೆಸಲಾಗುವುದೆ?’ ಎಂಬ ಪ್ರಶ್ನೆಗೆ ಸಚಿವರು, ‘ಈಗ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗದಂತೆ ತಪ್ಪಿಸುವುದು ನಮ್ಮ ಗುರಿ. ಅವರನ್ನು ವೈದ್ಯರೆಂದು ನಾವು ಪರಿಗಣಿಸುತ್ತಿಲ್ಲ. ವಿದ್ಯಾರ್ಥಿಗಳಾಗಿ ಕಲಿಕೆ ಮುಂದುವರಿಸಲು ಮಾತ್ರ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.