ADVERTISEMENT

ಸ್ವಂತ ಕಟ್ಟಡವೇ ಇಲ್ಲದ ಸಬ್‌ರಿಜಿಸ್ಟ್ರಾರ್ ಕಚೇರಿ

ಸಾರ್ವಜನಿಕರಿಗೂ ಅಗತ್ಯ ಸೌಲಭ್ಯ ಇಲ್ಲ

ಗುರು ಪಿ.ಎಸ್‌
Published 12 ಜುಲೈ 2021, 19:31 IST
Last Updated 12 ಜುಲೈ 2021, 19:31 IST
ಬೆಂಗಳೂರಿನ ವಿಜಯನಗರದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿ ನೋಟ
ಬೆಂಗಳೂರಿನ ವಿಜಯನಗರದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿ ನೋಟ   

ಬೆಂಗಳೂರು: ಸಾರ್ವಜನಿಕರ ಆಸ್ತಿ ನೋಂದಣಿ ಮಾಡುವ ನೋಂದಣಾಧಿಕಾರಿಗಳ ಕಚೇರಿಗಳು ಬಹುತೇಕ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದ್ದು, ದಿನನಿತ್ಯ ಭೇಟಿ ಕೊಡುವ ನಾಗರಿಕರಿಗೆ ಅಗತ್ಯವಾದ ಕನಿಷ್ಠ ಮೂಲಸೌಕರ್ಯಗಳಿಲ್ಲದೇ ಇರುವುದರಿಂದ ಜನ ಪರದಾಡುವಂತಾಗಿದೆ.

ಬೆಂಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಸುಮಾರು 43 ಉಪನೋಂದಣಾಧಿಕಾರಿಗಳ ಕಚೇರಿಗಳಿವೆ. ಈ ಪೈಕಿ ನೋಂದಣಿ ಮಹಾಪರಿವೀಕ್ಷಕ ಮತ್ತು ಆಯುಕ್ತರ ಕಚೇರಿ, ಬಿಡಿಎ ಕಚೇರಿ, ಆನೇಕಲ್, ಬ್ಯಾಟರಾಯನಪುರ, ಯಲಹಂಕದಲ್ಲಿನ ಕಚೇರಿ ಬಿಟ್ಟು, ಉಳಿದ ಎಲ್ಲವೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

‘ವಿಜಯನಗರದಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ತುಂಬಾ ಚಿಕ್ಕದಾಗಿದೆ. ಕೋವಿಡ್ ಕಾಲದಲ್ಲಿ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ಹೀಗಾಗಿ ರೋಗ ಹರಡುವ ಸಾಧ್ಯತೆ ಹೆಚ್ಚಿದೆ’ ಎಂದು ಆಸ್ತಿ ನೋಂದಣಿಗೆ ಬಂದಿದ್ದ ಹಿರಿಯರೊಬ್ಬರು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಒಂದು ಆಸ್ತಿ ನೋಂದಣಿಗೆ ದಿನಗಟ್ಟಲೇ ಕಾಯಬೇಕಾಗುತ್ತದೆ. ಆದರೆ, ಈ ಕಚೇರಿಗಳಲ್ಲಿ ಸರಿಯಾಗಿ ಕುಳಿತುಕೊಳ್ಳಲೂ ವ್ಯವಸ್ಥೆ ಇಲ್ಲ’ ಎಂದು ತಿಪ್ಪೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ನಿತ್ಯ ಸುಮಾರು 20ರಿಂದ 25 ಆಸ್ತಿ ನೋಂದಣಿಗಳು ನಡೆಯುತ್ತವೆ. ಒಂದೊಂದು ಆಸ್ತಿ ನೋಂದಣಿಗೆ ಕನಿಷ್ಠ ಐದಾರು ಜನ ಬರುತ್ತಾರೆ. ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದೇವೆ. ಆದರೆ, ಕಟ್ಟಡವೇ ಚಿಕ್ಕದಾಗಿರುವುದರಿಂದ ಅಂತರ ನಿಯಮ ಪಾಲನೆ ಕಷ್ಟವಾಗಿದೆ’ ಎಂದು ವಿಜಯನಗರ ಉಪನೋಂದಣಾಧಿಕಾರಿ ಸಲೀಂ ಹೇಳಿದರು.

ಖಾಲಿ ಮಾಡಬೇಕು:

‘ಸ್ವಂತ ಕಟ್ಟಡ ಎಂದು ಪರಿಗಣಿಸುವ ಪೈಕಿ, ಬಹುತೇಕ ಕಚೇರಿಗಳು ಮಿನಿ ವಿಧಾನಸೌಧ ಅಥವಾ ತಹಶೀಲ್ದಾರ್‌ ಕಚೇರಿಗಳಲ್ಲಿವೆ. ತಹಶೀಲ್ದಾರ್‌ಗಳು ಇದ್ದಕ್ಕಿದ್ದಂತೆ ಕಚೇರಿ ಖಾಲಿ ಮಾಡಿಕೊಡಿ ಎಂದರೆ ನಾವು ಖಾಲಿ ಮಾಡಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಹೇಳಿದರು.

‘ಈ ಹಿಂದೆ ಕಂದಾಯ ಭವನದ ಎಂಟನೇ ಮಹಡಿಯಲ್ಲಿ ಜಾಗ ನೀಡಿದ್ದರು. ವಾಹನ ನಿಲುಗಡೆ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳ ಕಾರಣ ಖಾಲಿ ಮಾಡಿಕೊಂಡು ಹೋಗಿ ಎಂದರು. ನೂರಾರು ವರ್ಷಗಳ ಹಿಂದಿನ ದಾಖಲೆಗಳು ಕಚೇರಿಯಲ್ಲಿರುತ್ತವೆ. ಹೀಗೆ, ಪದೇ ಪದೇ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಬೇಕಾಗುವುದರಿಂದ ದಾಖಲೆಗಳ ಸಂರಕ್ಷಣೆಯೂ ಕಷ್ಟವಾಗುತ್ತಿದೆ’ ಎಂದು ಅವರು ಹೇಳಿದರು.

ಬೇಕು ಶಾಶ್ವತ ಪರಿಹಾರ:

‘ಹಲವಾರು ಜನ ಆಸ್ತಿ ನೋಂದಣಿಗೆ ಬರುತ್ತಾರೆ. ಅವರಿಗೆ ಕುಳಿತುಕೊಳ್ಳಲು ಕುರ್ಚಿಯ ವ್ಯವಸ್ಥೆ ಕೂಡ ಇಲ್ಲ. ಈ ಕಾರಣಕ್ಕಾಗಿಯೇ ಎಷ್ಟೋ ಜನ ಗಲಾಟೆ ಮಾಡಿ ಹೋಗಿದ್ದಾರೆ’ ಎಂದು ಉಪನೋಂದಣಾಧಿಕಾರಿಯೊಬ್ಬರು ಹೇಳಿದರು.

‘ಪ್ರತಿ ತಹಶೀಲ್ದಾರ್‌ ಕಚೇರಿ ವ್ಯಾಪ್ತಿಯಲ್ಲಿ ಕನಿಷ್ಠ 5 ಗುಂಟೆ ಜಾಗ ನೀಡಿದರೂ ಒಳ್ಳೆಯ ಕಟ್ಟಡ ನಿರ್ಮಿಸಬಹುದು. ಸಾರ್ವಜನಿಕರಿಗೂ ಅನುಕೂಲವಾಗುತ್ತದೆಯಲ್ಲದೆ ಶಾಶ್ವತ ಪರಿಹಾರವೂ ಸಿಕ್ಕಂತಾಗುತ್ತದೆ’ ಎಂದರು.

ಅಂಕಿ–ಅಂಶ

₹900 ಕೋಟಿ - ಆಸ್ತಿ ನೋಂದಣಿಯಿಂದ ತಿಂಗಳಿಗೆ ಬರುವ ಅಂದಾಜು ಆದಾಯ

₹2,300 ಕೋಟಿ - ಏಪ್ರಿಲ್‌ನಿಂದ ಈವರೆಗೆ ಬಂದ ಅಂದಾಜು ಆದಾಯ

288 ‌- ರಾಜ್ಯದಲ್ಲಿನ ಒಟ್ಟು ಆಸ್ತಿ ನೋಂದಣಿ ಕಚೇರಿಗಳು

105 - ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.