ADVERTISEMENT

ಕೆಕೆಆರ್‌ಡಿಬಿಗೆ ₹2 ಸಾವಿರ ಕೋಟಿ ಅನುದಾನ: ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ

ಅಂದಾಜು ಪಟ್ಟಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ

ಮನೋಜ ಕುಮಾರ್ ಗುದ್ದಿ
Published 22 ಜನವರಿ 2020, 20:00 IST
Last Updated 22 ಜನವರಿ 2020, 20:00 IST
ಸುಬೋಧ್‌ ಯಾದವ್
ಸುಬೋಧ್‌ ಯಾದವ್   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ನೀಡುವ ವಾರ್ಷಿಕ ಅನುದಾನವನ್ನು ₹1500 ಕೋಟಿಯಿಂದ ₹2 ಸಾವಿರ ಕೋಟಿಗೆ ಹೆಚ್ಚಿಸಬೇಕು ಎಂಬ ಈ ಭಾಗದ ಜನತೆಯ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.

ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಮಂಡಳಿಯ ಕಾರ್ಯದರ್ಶಿ ಸುಬೋಧ್‌ ಯಾದವ್‌ ಅವರಿಗೆ ಸೂಚಿಸಿದೆ.

ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮೂಲಕ 2013ರಲ್ಲಿ ಜಾರಿಗೆ ತಂದ 371 ಜೆ ಕಾಯ್ದೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕೆಕೆಆರ್‌ಡಿಬಿಯನ್ನು ಸ್ಥಾಪಿಸಿತು. ಮಂಡಳಿ ಮೂಲಕವೇ ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಯೋಜನೆಯಡಿ ವಿವಿಧ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿದೆ.20

ADVERTISEMENT

14–15ನೇ ಸಾಲಿನಿಂದ ಮಂಡಳಿಗೆ ರಾಜ್ಯ ಸರ್ಕಾರ ₹1 ಸಾವಿರ ಕೋಟಿ ಹಂಚಿಕೆ ಮಾಡುತ್ತಿತ್ತು. 2018–19ಕ್ಕೆ ₹1500 ಕೋಟಿ ಹಂಚಿಕೆ ಮಾಡಿದೆ. 2020–21ನೇ ಸಾಲಿಗೆ ಅನುದಾನದ ಮೊತ್ತವನ್ನು ₹2 ಸಾವಿರ ಕೋಟಿಗೆ ಹೆಚ್ಚಿಸುವ ಉದ್ದೇಶದಿಂದಲೇ ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರ ಮಂಡಳಿಗೆ ಸೂಚಿಸಿದೆ ಎಂದು ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಖ್ಯವಾಗಿ ಆರೋಗ್ಯ ಸೇವೆ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮಂಡಳಿಯು ಆದ್ಯತೆ ನೀಡುತ್ತಿದ್ದು, ಹೆಚ್ಚು ಅನುದಾನವನ್ನು ಈ ಎರಡು ಕ್ಷೇತ್ರಗಳಿಗೇ ಮೀಸಲಿಟ್ಟಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಅಳವಡಿಸುವ ಮೂಲಕ ಆರು ಜಿಲ್ಲೆಗಳ ಮಕ್ಕಳ ಶೈಕ್ಷಣಿಕ ಮಟ್ಟವನ್ನು ವೃದ್ಧಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ನಂತರದ ಆದ್ಯತೆ ಮೂಲಸೌಕರ್ಯಕ್ಕೆ ನೀಡಲಾಗಿದೆ. ರಸ್ತೆಗಳು, ಕಾಲೇಜು ಕಟ್ಟಡ, ಕ್ರೀಡಾಂಗಣಗಳಿಗೆ ಕ್ರೀಡಾ ಪರಿಕರ ಒದಗಿಸುವುದಕ್ಕೂ ಆರ್ಥಿಕ ನೆರವು ನೀಡಲಾಗುತ್ತಿದೆ. ವೃತ್ತಿಪರ ತರಬೇತಿಗೆ ಆಯ್ದ ಜಿಲ್ಲೆಗಳಲ್ಲಿ ಅತ್ಯುನ್ನತ ಅಧ್ಯಯನ ಕೇಂದ್ರ ತೆರೆಯಲೂ ಮುಂದಾಗಿದ್ದೇವೆ’ ಎಂದರು.

*
ಸೀಮಿತ ಸಿಬ್ಬಂದಿ ಹಾಗೂ ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ಇಲ್ಲದಿದ್ದರೂ 2019–20ನೇ ಸಾಲಿನಲ್ಲಿ ₹ 1200 ಕೋಟಿ ಅನುದಾನ ವೆಚ್ಚ ಮಾಡಿದ್ದೇವೆ. ಇದರಿಂದ ತೃಪ್ರಿಯಾಗಿರುವ ಸರ್ಕಾರ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದ್ದು ಸ್ವಾಗತಾರ್ಹ.
–ಸುಬೋಧ ಯಾದವ್,ಕೆಕೆಆರ್‌ಡಿಬಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.