ADVERTISEMENT

ಜರ್ಬೆರಾ ಬೆಳೆದು 10 ಗುಂಟೆಯಲ್ಲಿ ಲಕ್ಷ ಆದಾಯ ಕಂಡ ರೈತ

ಹಸಿರುಮನೆಯಲ್ಲಿ ಪುಷ್ಪ ಕೃಷಿ ಕೈಗೊಂಡಿರುವ ರಾಜೇಂದ್ರ

ಸುಧಾಕರ ಎಸ್.ತಳವಾರ, ಬೆಂಗಳೂರು
Published 2 ಡಿಸೆಂಬರ್ 2019, 10:58 IST
Last Updated 2 ಡಿಸೆಂಬರ್ 2019, 10:58 IST
ನಿಪ್ಪಾಣಿ ತಾಲ್ಲೂಕಿನ ಗಳತಗಾ ಗ್ರಾಮದಲ್ಲಿ ಹಸಿರು ಮನೆಯಲ್ಲಿ ಜರ್ಬೆರಾ ಪುಷ್ಪ ಕೃಷಿ ಕೈಗೊಂಡಿರುವ ಪ್ರಗತಿಪರ ಕೃಷಿಕ ರಾಜೇಂದ್ರ ಪವಾರ
ನಿಪ್ಪಾಣಿ ತಾಲ್ಲೂಕಿನ ಗಳತಗಾ ಗ್ರಾಮದಲ್ಲಿ ಹಸಿರು ಮನೆಯಲ್ಲಿ ಜರ್ಬೆರಾ ಪುಷ್ಪ ಕೃಷಿ ಕೈಗೊಂಡಿರುವ ಪ್ರಗತಿಪರ ಕೃಷಿಕ ರಾಜೇಂದ್ರ ಪವಾರ   

ಚಿಕ್ಕೋಡಿ: ‘ತೋಟಗಾರಿಕೆ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ಸಹಾಯಧನ ಪಡೆದುಕೊಂಡು 10 ಗುಂಟೆ ಭೂಮಿಯಲ್ಲಿ ಪಾಲಿಹೌಸ್‌ನಲ್ಲಿ ಜರ್ಬೆರಾ ಪುಷ್ಪ ಕೃಷಿ ಕೈಗೊಂಡಿದ್ದೇನೆ. ಸಸಿಗಳನ್ನು ನಾಟಿ ಮಾಡಿದ ಮೂರು ತಿಂಗಳ ಬಳಿಕ ಹೂ ಬಿಡಲಾರಂಭಿಸಿದ್ದು, ಒಂದೇ ತಿಂಗಳಿನಲ್ಲಿ ₹ 1.75 ಲಕ್ಷ ಆದಾಯ ಬಂದಿದೆ. ₹ 75 ಸಾವಿರ ವೆಚ್ಚ ಕಳೆದರೂ ₹ 1 ಲಕ್ಷದಷ್ಟು ಹಣ ಕೈ ಸೇರಿದೆ. ಗಿಡಗಳ ಆರೈಕೆ, ಕೀಟನಾಶಕ, ಗೊಬ್ಬರ ನಿರ್ವಹಣೆ ಮಾಡಿದರೆ 6ರಿಂದ 8 ವರ್ಷಗಳ ಕಾಲ ನಿರಂತರವಾಗಿ ಆದಾಯದ ನಿರೀಕ್ಷೆ ಇದೆ’.

– ನಿಪ್ಪಾಣಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಭೋಜ ಮತಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರೂ ಆಗಿರುವ ಗಳತಗಾ ಗ್ರಾಮದ ಪ್ರಗತಿಪರ ಕೃಷಿಕ ರಾಜೇಂದ್ರ ಪವಾರ ತಾವು ಕೈಗೊಂಡಿರುವ ಪುಷ್ಪ ಕೃಷಿಯ ಕುರಿತು ವಿವರಣೆ ನೀಡಿದರು.

ಪವಾರ ಅವರು ತೋಟಗಾರಿಕೆ ಇಲಾಖೆಯು ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ನೀಡುವ ₹ 12 ಲಕ್ಷ ಅನುದಾನದಲ್ಲಿ 10 ಗುಂಟೆ ಭೂಮಿಯಲ್ಲಿ ಪಾಲಿಹೌಸ್ ಮಾಡಿಕೊಂಡಿದ್ದಾರೆ. ಅಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ. ₹ 12 ಲಕ್ಷ ಅನುದಾನದ ಪೈಕಿ ಇಲಾಖೆಗೆ ₹ 1 ಲಕ್ಷ ಹಣವನ್ನು ರೈತರ ವಂತಿಗೆಯಾಗಿ ಪಾವತಿಸಿದ್ದಾರೆ. ಪುಣೆಯ ಕೆ.ಎಫ್. ಬಯೊ ಪ್ಲಾಂಟ್‌ನಿಂದ ₹ 2.27 ಲಕ್ಷ ವೆಚ್ಚದಲ್ಲಿ 3,600 ಬರ್ಬೆರಾ ಸಸಿಗಳನ್ನು ಖರೀದಿಸಿ ನಾಟಿ ಮಾಡಲಾಗಿದ್ದು, ಇದಕ್ಕೆ ಇಲಾಖೆಯು ₹ 1.20 ಲಕ್ಷ ಸಹಾಯಧನ ನೀಡಿದೆ.

ADVERTISEMENT

ಮಹಾರಾಷ್ಟ್ರದ ಶಿರೋಳದ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗಣಪತರಾವ್ ಪಾಟೀಲ ಅವರು 400 ಎಕರೆ ಪ್ರದೇಶದಲ್ಲಿ ಬೆಳೆದಿರುವ ಜರ್ಬೆರಾ ಪುಷ್ಪ ಕೃಷಿಯನ್ನು ಕಂಡು ಅದರಿಂದ ಪ್ರೇರಿತಗೊಂಡ ರಾಜೇಂದ್ರ ಅವರೂ ಲಾಭದಾಯಕ ಪುಷ್ಪ ಕೃಷಿಯನ್ನು ಆರಂಭಿಸಿದ್ದಾರೆ.

‘ಸಾಂಗ್ಲಿಯಲ್ಲಿ ಮಣ್ಣು ಪರೀಕ್ಷೆ ಮಾಡಿಸಿ, ಹುಕ್ಕೇರಿ ತಾಲ್ಲೂಕಿನ ಕಣಗಲಾದಿಂದ 20 ಲಾರಿಯಷ್ಟು ಜಾಜ್ ಮಣ್ಣು ತರಿಸಿ, ಮಣ್ಣಿನ ಪಟ್ಟೆ ಸಾಲುಗಳನ್ನು ನಿರ್ಮಿಸಿದ್ದೇವೆ. ನೆಲದಿಂದ ಸುಮಾರು 2 ಅಡಿಗಳಷ್ಟು ಎತ್ತರದ ಮಣ್ಣಿನ ಪಟ್ಟೆ ಸಾಲುಗಳಲ್ಲಿ ಕೊಟ್ಟಿಗೆ ಗೊಬ್ಬರ ಬೆರೆಸಿ ಆಗಸ್ಟ್‌ನಲ್ಲಿ 3,600 ಸಸಿಗಳನ್ನು ನಾಟಿ ಮಾಡಿದ್ದೇವೆ. ನಾಟಿ ಮಾಡಿದ 3 ತಿಂಗಳ ನಂತರ ಹೂವು ಬಿಡಲಾರಂಭಿಸಿವೆ. ಕೆಂಪು, ಬಿಳಿ, ನಸುಗೆಂಪು, ಕಿತ್ತಳೆ, ಹಳದಿ ಬಣ್ಣದ ಹೂ ಬಿಡುತ್ತಿವೆ. ಅಕ್ಟೋಬರ್ 25ರಿಂದ ಮುಂಬೈನ ದಾದರ್ ಮಾರುಕಟ್ಟೆಗೆ ಹೂ ಸರಬರಾಜು ಮಾಡಲಾಗುತ್ತಿದೆ. ನ. 25ರವರೆಗೆ ಒಂದು ತಿಂಗಳ ಅವಧಿಯಲ್ಲಿ ಉತ್ತಮ ಆದಾಯ ದೊರೆತಿದೆ’ ಎಂದು ರಾಜೇಂದ್ರ ತಿಳಿಸಿದರು.

‘ಈಗ ಸೀಸನ್‌ ಇಲ್ಲ. ಒಂದು ಹೂವಿಗೆ ₹ 3ರಿಂದ ₹ 8 ಸಿಗುತ್ತಿದೆ. ಮದುವೆ, ಸಮಾರಂಭ ಇತ್ಯಾದಿಗಳು ನಡೆಯುವ ಸೀಸನ್‌ನಲ್ಲಿ ₹ 15ರವರೆಗೂ ಮಾರಾಟವಾಗುತ್ತವೆ. 2 ದಿನಗಳಿಗೊಮ್ಮೆ 1,500ರಿಂದ 1,600 ಹೂವುಗಳನ್ನು ಕೀಳುತ್ತೇವೆ’ ಎಂದು ಹೇಳಿದರು.

‘ರೈತರು ಸಾಂಪ್ರದಾಯಿಕ ಕಬ್ಬು, ತಂಬಾಕು, ಗೋವಿನಜೋಳದಂತಹ ಬೆಳೆಗಳಿಂದ ವಿಮುಖರಾಗಿ ಆದಾಯ ನೀಡುವ ಜರ್ಬೆರಾದಂತಹ ಪುಷ್ಪಗಳ ಕೃಷಿಯತ್ತ ಆಸಕ್ತಿ ತೋರಬೇಕು. ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ರೈತರು ಅವುಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಹೊಂದಬೇಕು’ ಎನ್ನುತ್ತಾರೆ ಅವರು. ಅವರ ಸಂಪರ್ಕಕ್ಕೆ: 9731946922.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.