ADVERTISEMENT

ರೈತರು ದನಿಯಿಲ್ಲದ ವರ್ಗ, ಅವರಿಗೆ ನ್ಯಾಯ ಒದಗಿಸಿ: ಹೈಕೋರ್ಟ್‌ಗೆ ಕೇಂದ್ರ ಮನವಿ

ಅಂಕಿ ಅಂಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 13:52 IST
Last Updated 27 ನವೆಂಬರ್ 2018, 13:52 IST
   

ಬೆಂಗಳೂರು:‘ರಾಜ್ಯದ ಕಬ್ಬು ಬೆಳೆಗಾರರು ದನಿಯಿಲ್ಲದ ಸಮುದಾಯವಾಗಿದ್ದು, ಇವರಿಗೆ ನ್ಯಾಯ ಒದಗಿಸಲು ಮುಂದಾಗಬೇಕು’ ಎಂದು ಹೈಕೋರ್ಟ್‌ಗೆ, ಕೇಂದ್ರ ಸರ್ಕಾರ ಮನವಿ ಮಾಡಿದೆ.

ಕಲಬುರಗಿ ಜಿಲ್ಲೆಯ ಆಳಂದದ ಎನ್ಎಸ್ಎಲ್‌ ಸಕ್ಕರೆ ಕಾರ್ಖಾನೆ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ‘ಈ ಅರ್ಜಿ ಕೇಂದ್ರ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ನಡುವಿನ ವ್ಯಾಜ್ಯವಾಗಿದ್ದರೂ, ಬಹುಮುಖ್ಯವಾಗಿ ಕಬ್ಬು ಬೆಳೆಗಾರ ರೈತರು ಇದರ ಕೇಂದ್ರಬಿಂದು. ಆದರೆ, ಈ ಅರ್ಜಿಯಲ್ಲಿ ಅವರು ಪ್ರತಿವಾದಿಗಳೂ ಅಲ್ಲ. ಆದ್ದರಿಂದ ದನಿಯಿಲ್ಲದ ಈ ವರ್ಗಕ್ಕೆ ಹೈಕೋರ್ಟ್ ನ್ಯಾಯ ಒದಗಿಸಿಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಈ ಕೋರಿಕೆಗೆ ಸ್ಪಂದಿಸಿದನ್ಯಾಯಪೀಠ, ‘2017-18ನೇ ಸಾಲಿನಲ್ಲಿ ರಾಜ್ಯದಲ್ಲಿ ರೈತರು ಬೆಳೆದ ಕಬ್ಬು ಹಾಗೂ ಇದರಲ್ಲಿ ಕಾರ್ಖಾನೆಗಳಿಗೆ ರವಾನೆಯಾದ ಪ್ರಮಾಣ ಮತ್ತು ಅದರಿಂದ ಉತ್ಪಾದನೆಯಾದ ಸಕ್ಕರೆ ಕುರಿತಂತೆ ಸಂಪೂರ್ಣ ಅಂಕಿ ಅಂಶ ಒದಗಿಸಿ' ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಮಾಹಿತಿ ನೀಡುವ ಕುರಿತಂತೆ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಹಾಗೂ ಕಬ್ಬು ಆಯುಕ್ತರಿಗೆ ನ್ಯಾಯಪೀಠ ನಿರ್ದೇಶಿಸಿದೆ.

‘ಅಂಕಿ ಅಂಶ ಕೈ ಸೇರಿದ ಮೇಲೆ ಕಬ್ಬು ಬೆಳೆಗಾರರ ಸಮಸ್ಯೆಗೆ ಸೂಕ್ತ ಮಾರ್ಗೋಪಾಯ ರೂಪಿಸಬಹುದು’ ಎಂಬ ಮೌಖಿಕ ಇಂಗಿತವನ್ನೂ ನ್ಯಾಯಪೀಠ ಇದೇ ವೇಳೆ ವ್ಯಕ್ತಪಡಿಸಿದೆ.

ನಿರ್ಬಂಧ
ಸಕ್ಕರೆ ಉತ್ಪಾದನೆಯ ಶೇ.10ರಷ್ಟಕ್ಕೆ ಮಾತ್ರ ಮಾರಾಟ ಅನುಮತಿ ನೀಡಿ, ಇನ್ನುಳಿದ ಶೇ.90ರಷ್ಟು ಮಾರಾಟಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.

‘ಶೇ.10ರಷ್ಟು ಮಾರಾಟಕ್ಕೆ ಅನುಮತಿ ನೀಡಿದ ಕಾರಣ ಕಾರ್ಖಾನೆಯಲ್ಲಿ ಸಕ್ಕರೆ ಉಳಿದು ನಮಗೆ ನಷ್ಟ ಉಂಟಾಗಿದೆ’ ಎಂದು ಕಂಪನಿ ಆಕ್ಷೇಪಿಸಿದೆ.

ಪ್ರಭುಲಿಂಗ ಕೆ.ನಾವದಗಿ

‘ಆದ್ದರಿಂದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅನುಮತಿ ನೀಡಬೇಕು’ ಎಂದು ಕೋರಿದೆ.

*ಒಮ್ಮೆ ಅಂಕಿ ಅಂಶಗಳು ಕೋರ್ಟ್ ಕೈ ಸೇರಿದರೆ ಕಬ್ಬು ಬೆಳೆಗಾರ ರೈತರಿಗೆ ಹೇಗೆ ಮತ್ತು ಎಲ್ಲಿ ತೊಂದರೆ ಆಗುತ್ತಿದೆ ಎಂಬ ನಿಖರ ವಿವರ ಲಭ್ಯವಾಗುತ್ತವೆ.

-ಪ್ರಭುಲಿಂಗ ಕೆ.ನಾವದಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.