ಸಿದ್ದರಾಮಯ್ಯ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಕಬ್ಬಿನ ದರ ಪರಿಷ್ಕರಣೆ ಕುರಿತು ನಡೆದ ಸಭೆಯ ಅಂತಿಮ ಸುತ್ತಿನ ಮಾತುಕತೆಯಲ್ಲಿ ₹50 ಹೆಚ್ಚುವರಿ ಕೊಡಲು ಸಕ್ಕರೆ ಕಾರ್ಖಾನೆ ಮಾಲೀಕರು ಹಿಂದೇಟು ಹಾಕಿದಾಗ ಅಸಮಾಧಾನಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ‘ನಷ್ಟವಾಗುತ್ತಿದ್ದರೆ ಬಾಗಿಲು ಮುಚ್ಚಿಬಿಡಿ’ ಎಂದು ಕಟುವಾಗಿ ಹೇಳಿದರು.
‘ಕಾರ್ಖಾನೆ ನಡೆಸುವುದು ಬಹಳ ಕಷ್ಟಕರವಾಗಿದೆ. ಸಕ್ಕರೆ, ಎಥೆನಾಲ್, ವಿದ್ಯುತ್ ಉತ್ಪಾದನೆ ಮಾಡಿದರೂ ನಾವು ಸಂಕಷ್ಟದಲ್ಲಿದ್ದೇವೆ. ರೈತರಿಂದಲೂ ಕೆಟ್ಟ ಬೈಗುಳ ಕೇಳಬೇಕಿದೆ. ಕೇಂದ್ರದ ನೀತಿ, ರೈತರ ಒತ್ತಡದಿಂದ ಕಾರ್ಖಾನೆ ನಡೆಸುವುದೇ ಕಷ್ಟವಾಗಿದೆ. ಬೇಕಿದ್ದರೆ ಸರ್ಕಾರವೇ ಕಾರ್ಖಾನೆಗಳನ್ನು ವಹಿಸಿಕೊಳ್ಳಲಿ’ ಎಂದು ಮಾಲೀಕರು ಅವಲತ್ತುಕೊಂಡರು.
‘ಸಹಕಾರಿ ರಂಗದ ಇಐಡಿ ಪ್ಯಾರಿ ಶುಗರ್ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ₹3,211ಪಾವತಿಸುತ್ತಿದೆ. ಇದೇ ಮಾದರಿಯಲ್ಲಿ ಉಳಿದ ಕಾರ್ಖಾನೆಗಳಿಗೆ ಯಾಕೆ ಪಾವತಿ ಸಾಧ್ಯವಿಲ್ಲ? ನೆಪ ಹೇಳದೆ ಹೆಚ್ಚುವರಿ ₹100ರಲ್ಲಿ ₹50 ನೀವು ಕೊಡಿ. ಸರ್ಕಾರ ₹50 ಭರಿಸುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.
‘ನಾವು ಉದ್ಯೋಗ ಸೃಷ್ಟಿಸಿ ಗ್ರಾಮೀಣ ಆರ್ಥಿಕತೆಗೆ ಅಪಾರ ಕೊಡುಗೆ ನೀಡುತ್ತಿದ್ದೇವೆ. ಕೇಂದ್ರದ ನೀತಿಗಳಿಂದಲೂ ನಮಗೆ ನಷ್ಟ ಆಗುತ್ತಿದೆ’ ಎಂಬ ಮಾಲೀಕರ ಮಾತಿಗೆ ಪ್ರತಿಕ್ರಿಯಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ, ‘ಈ ಸಮಸ್ಯೆ ಸೃಷ್ಟಿ ಆಗಿರುವುದು ಕೇಂದ್ರ ಸರ್ಕಾರದ ಕಾರಣದಿಂದ ಎಂದು ನೀವೆಲ್ಲಾ ಒಟ್ಟಾಗಿ ಮಾಧ್ಯಮಗಳ ಮುಂದೆ ಸತ್ಯ ಹೇಳಿ, ಕೇಂದ್ರಕ್ಕೆ ಪತ್ರ ಬರೆಯಿರಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.