ADVERTISEMENT

ಪರಿಶಿಷ್ಟರ ಸಾವಿರ ಎಕರೆ ಜಾಗದಲ್ಲಿ ಸತೀಶ್‌ ಸಕ್ಕರೆ ಕಾರ್ಖಾನೆ: ರಮೇಶ

ಇನ್ನೂ 10–15 ಶಾಸಕರು ಬಿಜೆಪಿಗೆ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:30 IST
Last Updated 1 ಡಿಸೆಂಬರ್ 2019, 11:30 IST
   

ಗೋಕಾಕ: ಇಲ್ಲಿನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಸಹೋದರ ಸತೀಶ ಜಾರಕಿಹೊಳಿ ವಿರುದ್ಧ ಶನಿವಾರ ನೇರ ವಾಗ್ದಾಳಿ ನಡೆಸಿದರು.

‘ಸಂಕಲ್ಪ ಸಮಾವೇಶ’ದ ಹೆಸರಿನಲ್ಲಿ ಜನರನ್ನು ಸೇರಿಸಿದ್ದ ಅವರು, ‘ಬುದ್ಧ– ಬಸವ– ಅಂಬೇಡ್ಕರ್‌ ಮಂತ್ರವನ್ನು ಜಪಿಸಿ, ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಸತೀಶ್‌ ಮಾಡುತ್ತಿದ್ದಾರೆ. ಸ್ಮಶಾನದಲ್ಲಿ ವಾಸ್ತವ್ಯ ಹೂಡುವ ನಾಟಕ ಮಾಡುತ್ತಾರೆ. ಯಮಕನಮರಡಿ ಕ್ಷೇತ್ರದಲ್ಲಿ ಪರಿಶಿಷ್ಟರ ಸಾವಿರ ಎಕರೆ ಜಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದ್ದಾರೆ’ ಎಂದು ದೂರಿದರು.

‘ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಗೊಳ್ಳಲು ಸತೀಶ ಹಾಗೂ ಎಂ.ಬಿ. ಪಾಟೀಲ ಕಾರಣ. ಆರಂಭದಲ್ಲಿ ಇವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ನಮ್ಮನ್ನು ಬಂಡಾಯ ಏಳುವಂತೆ ಮಾಡಿದರು. ತಮಗೆ ಸಚಿವ ಸ್ಥಾನ ಸಿಕ್ಕ ತಕ್ಷಣ, ನಮ್ಮನ್ನು ಬಿಟ್ಟರು’ ಎಂದರು.

ADVERTISEMENT

‘ಸದ್ಯದಲ್ಲಿಯೇ ಮತ್ತೊಂದು ಆಪರೇಷನ್‌ ಕಮಲ ನಡೆಯಲಿದ್ದು, ಕಾಂಗ್ರೆಸ್‌– ಜೆಡಿಎಸ್‌ನಿಂದ 10ರಿಂದ 15 ಶಾಸಕರು ಬಿಜೆಪಿ ಸೇರಲಿದ್ದಾರೆ. ಅನರ್ಹತೆ ಪ್ರಕರಣ ಇತ್ಯರ್ಥವಾದ ನಂತರ ಮತ್ತಷ್ಟು ಶಾಸಕರು ಬಿಜೆಪಿ ಸೇರುವುದು ಖಚಿತ’ ಎಂದರು.

‘20 ಶಾಸಕರನ್ನು ಕರೆತರುವೆ ಎಂದು ಒಬ್ಬರಿಗೆ ಮಾತು ಕೊಟ್ಟಿದ್ದೆ. ಅದು ಗೊತ್ತಾಗಿ ಎಚ್‌.ಡಿ.ಕುಮಾರಸ್ವಾಮಿ ನನ್ನನ್ನು ಉಪ ಮುಖ್ಯಮಂತ್ರಿ ಮಾಡಿ, ಇಂಧನ ಖಾತೆಯ ಭರವಸೆ ನೀಡಿದ್ದರು. ಆದರೆ, ನಾನು ಆಗ ಮನಸ್ಸು ಮಾಡಲಿಲ್ಲ’ ಎಂದರು.

‘ಮೈತ್ರಿ ಸರ್ಕಾರದಲ್ಲಿ ಗೋಕಾಕಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಲಿಲ್ಲ. ಚಮಚಾಗಿರಿ ಮಾಡುವವರಿಗೆ ಮಾತ್ರ ಕಾಂಗ್ರೆಸ್‌ನಲ್ಲಿ ಬೆಲೆ ಇದೆ. 25 ವರ್ಷದಿಂದ ಪಕ್ಷವನ್ನು ಸಂಘಟಿಸಿದ್ದ ನನಗೆ ಮನ್ನಣೆ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್‌ ತೊರೆದೆ’ ಎಂದು ಹೇಳಿದರು.

ತಿರುಗೇಟು: ‘ರಮೇಶ ಜಾರಕಿಹೊಳಿ 5 ಬಾರಿ ಶಾಸಕರಾಗಿದ್ದರೂ ಅವರಿಗೆ ರಾಜಕೀಯದ ಅನುಭವ ಬಂದಿಲ್ಲ. ಪ್ರಬುದ್ಧ ರಾಜಕಾರಣಿ ಕೂಡ ಅಲ್ಲ’ ಎಂದು ಸತೀಶ ಬೆಳಗಾವಿಯಲ್ಲಿ ತಿರುಗೇಟು ನೀಡಿದರು.

‘ಯಾರಿಂದಲೂ ಒತ್ತಾಯಪೂರ್ವಕವಾಗಿ ಜಮೀನು ಪಡೆದಿಲ್ಲ. ಎಲ್ಲರ ಒಪ್ಪಿಗೆ ಪಡೆದೇ ಖರೀದಿಸಿದ್ದೇನೆ. ರಾಜಕಾರಣದಲ್ಲಿ ಹಣ ಮಾಡಲು ಆಗಲ್ಲ. ಹೀಗಾಗಿ ಉದ್ಯಮ ಸ್ಥಾಪಿಸಿದ್ದೇನೆ’ ಎಂದು ಸತೀಶ ಸ್ಪಷ್ಟಪಡಿಸಿದರು.

‘ಜನರು ನೆರೆ ಪ್ರವಾಹದಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರಮೇಶ ಸಮಾವೇಶ ಆಯೋಜಿಸಿರುವುದುಸರಿಯಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.