ADVERTISEMENT

ಕಬ್ಬು ಬೆಳೆಗಾರರ ಸಮಸ್ಯೆ: ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಈರಣ್ಣ ಕಡಾಡಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 16:01 IST
Last Updated 5 ಡಿಸೆಂಬರ್ 2025, 16:01 IST
ಈರಣ್ಣ ಕಡಾಡಿ
ಈರಣ್ಣ ಕಡಾಡಿ   

ನವದೆಹಲಿ: ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಬೇಕು. ಕಬ್ಬಿನ ರಿಕವರಿ ದರ ಇಳಿಕೆ ಮಾಡಬೇಕು. ಕಬ್ಬು ಕಟಾವು ಮತ್ತು ಸಾರಿಗೆ ಹೊರತುಪಡಿಸಿ ಎಫ್‌ಆರ್‌ಪಿ ದರ ನಿಗದಿ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು. 

ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ರಾಜ್ಯಸಭೆಯಲ್ಲಿ ಶುಕ್ರವಾರ ಶೂನ್ಯ ವೇಳೆಯಲ್ಲಿ ಗಮನ ಸೆಳೆದ ಅವರು, ‘2019 ರಿಂದ ಸಕ್ಕರೆಯ ಎಂಎಸ್‌ಪಿ ಪ್ರತಿ ಕೆ.ಜಿಗೆ ಕೇವಲ ₹31 ಇದೆ. ಅದನ್ನು ಹೆಚ್ಚಿಸಿಲ್ಲ. ಈ ಕಾರಣದಿಂದ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿಗೆ ಹೆಚ್ಚಿನ ದರ ನೀಡಲು ಹಿಂದೇಟು ಹಾಕುತ್ತಿವೆ. ಆದರೆ, ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ಸುಮಾರು 40ರಂತೆ ಸಕ್ಕರೆ ಮಾರಾಟವಾಗುವ ಕಾರಣ ಎಂಎಸ್‌ಪಿ ಹೆಚ್ಚಿಸುವುದು ಅನಿವಾರ್ಯ. ಇದರಿಂದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಉದ್ಯಮಕ್ಕೆ ಹೆಚ್ಚು ಸಹಾಯವಾಗಲಿದೆ‘ ಎಂದರು. 

‘ಕರ್ನಾಟಕದಲ್ಲಿ 270 ಕೋಟಿ ಲೀಟರ್ ಎಥೆನಾಲ್‌ ಉತ್ಪಾದನೆ ಆಗುತ್ತಿದೆ. ರಾಜ್ಯದಲ್ಲಿ ಎಥೆನಾಲ್‌ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡಬೇಕು ಇದರಿಂದಾಗಿ ಕೋಟ್ಯಂತರ ಜನರಿಗೆ ಲಾಭವಾಗಲಿದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಬ್ಬು ಬೆಳೆಗಾರರ ಸಹಾಯಕ್ಕೆ ಬರಬೇಕು‘ ಎಂದು ಅವರು ಆಗ್ರಹಿಸಿದರು. 

ADVERTISEMENT

‘ದೇಶದ ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ಮೂರನೇ ಸ್ಥಾನದಲ್ಲಿದೆ. ದೇಶದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಶೇಕಡಾ 16 ರಷ್ಟು ಕರ್ನಾಟಕದಲ್ಲಿಯೇ ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ 7.5 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು 45 ಲಕ್ಷ ಟನ್‌ ಸಕ್ಕರೆ ಉತ್ಪಾದನೆಯಾಗುತ್ತಿದೆ. ಎಫ್ಆರ್‌ಪಿ ನಿಗದಿ ಮಾಡುವ ಸಂದರ್ಭದಲ್ಲಿ ರಾಜ್ಯದ ಕಬ್ಬಿನ ರಿಕವರಿ ಪ್ರಮಾಣವನ್ನು ಶೇ 9.5ಕ್ಕೆ ಇಳಿಸಬೇಕು. ಇದರಿಂದ ರೈತರಿಗೆ ಭಾರಿ ಅನುಕೂಲವಾಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.