ADVERTISEMENT

ಬದುಕಿದ್ದಾಗ ನನ್ನನ್ನು ಯಾರೂ ಇಷ್ಟಪಡಲಿಲ್ಲ, ಸಾಧನೆಯು ಮಾಡಲಿಲ್ಲ:ಯುವತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 4:39 IST
Last Updated 14 ಜನವರಿ 2019, 4:39 IST
ಯಾಸ್ಮೀನ್‌ ತಾಜ್‌  (ಸಂಗ್ರಹ ಚಿತ್ರ)
ಯಾಸ್ಮೀನ್‌ ತಾಜ್‌ (ಸಂಗ್ರಹ ಚಿತ್ರ)   

ಮೈಸೂರು: ‘ಬದುಕಿದ್ದಾಗ ನನ್ನನ್ನು ಯಾರೂ ಇಷ್ಟಪಡಲಿಲ್ಲ. ನಾನು ಯಾವ ಸಾಧನೆಯನ್ನೂ ಮಾಡಲಾಗಲಿಲ್ಲ’ ಎಂದು ಹೇಳಿ ಮಾತ್ರೆ ಸೇವಿಸಿದ ವಿಡಿಯೊ ಚಿತ್ರೀಕರಿಸಿದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬನ್ನಿಮಂಟಪದ ಕಾವೇರಿ ನಗರದ ನಿವಾಸಿ ಅಬ್ದುಲ್ ರಫೀಕ್‌ ಅವರ ಪುತ್ರಿ ಯಾಸ್ಮೀನ್‌ ತಾಜ್‌ (18) ಆತ್ಮಹತ್ಯೆ ಮಾಡಿಕೊಂಡವರು. ನಗರದ ಜೆಎಸ್‌ಎಸ್‌ ಪಿಯು ಕಾಲೇಜಿನಲ್ಲಿ ಕಾಮರ್ಸ್ ಓದುತ್ತಿದ್ದರು.

‘ಓದು ತಲೆಗೆ ಹತ್ತುತ್ತಿಲ್ಲ. ನಾನು ಬುದ್ಧಿವಂತ ವಿದ್ಯಾರ್ಥಿನಿಯಲ್ಲ. ಗಾಯಕಿ ಅಥವಾ ವಕೀಲೆಯಾಗುವ ಕನಸಿತ್ತು. ಅವು ಈಡೇರಲು ಸಾಧ್ಯವಿಲ್ಲ. ಹೀಗಾಗಿ, ಯಾವ ಸಾಧನೆಯನ್ನೂ ಮಾಡಲಾಗದು. ನನ್ನ ಆರೋಗ್ಯವೂ ಸರಿಯಿಲ್ಲ. ನನ್ನನ್ನು ಯಾರೂ ಇಷ್ಟಪಡುತ್ತಿಲ್ಲ’ ಎಂದು ಹೇಳಿಕೊಂಡು ಮೊಬೈಲ್‌ ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ.

ADVERTISEMENT

‘ನಾನು ಸಾಯುವ ವಿಡಿಯೊ ಸಿಕ್ಕರೆ ಲೈಕ್‌ ಮಾಡಿರಿ; ಶೇರ್‌ ಮಾಡಿರಿ. ಇದನ್ನು ಪ್ರಪಂಚಕ್ಕೆ ತಿಳಿಸಿರಿ’ ಎಂದು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯಾಸ್ಮಿನ್‌ ತಾಜ್‌ ಅವರು ಮಾನಸಿಕ ಸಮಸ್ಯೆಗೆ ಔಷಧಿ ಪಡೆಯುತ್ತಿದ್ದರು. ವೈದ್ಯರು ನೀಡಿದ್ದ ಮಾತ್ರೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವತಿಯ ತಂದೆ ಅಬ್ದುಲ್‌ ರಫೀಕ್‌ ಅವರು, ‘ತಮ್ಮ ಮಗಳು ಮಾತ್ರೆಗಳನ್ನು ಸೇವಿಸಿ ಅಸ್ವಸ್ಥರಾಗಿದ್ದಳು. ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ’ ಎಂದು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.