ADVERTISEMENT

ಆತ್ಮಹತ್ಯೆ ಬಗ್ಗೆ ಶಿವಕುಮಾರ ಅವರಿಗೆ ಪತ್ರ ಬರೆದಿದ್ದಾರೆಯೇ?

ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬ; ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 9:27 IST
Last Updated 10 ನವೆಂಬರ್ 2020, 9:27 IST
ಹೊಸಪೇಟೆ ಸಮೀಪದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 28ನೇ ನುಡಿಹಬ್ಬದಲ್ಲಿ ಡಾ. ಹಣಮಂತ ಗೋವಿಂದಪ್ಪ ದಡ್ಡಿ (ವೈದ್ಯಕೀಯ ಕ್ಷೇತ್ರ) ಹಾಗೂ ವೂಡೇ ಪಿ. ಕೃಷ್ಣ (ಶಿಕ್ಷಣ ಕ್ಷೇತ್ರ) ಅವರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ನಾಡೋಜ ಗೌರವ ಪದವಿ ಪ್ರದಾನ ಮಾಡಿದರು. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಪ್ರೊ.ಎಸ್‌.ಸಿ. ಶರ್ಮಾ, ಕುಲಪತಿ ಪ್ರೊ.ಸ.ಚಿ. ರಮೇಶ ಹಾಗೂ ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ ಚಿತ್ರದಲ್ಲಿ ಇದ್ದಾರೆಚಿತ್ರ: ಕೆ.ಎಂ. ಕೊಟ್ರೇಶ್‌
ಹೊಸಪೇಟೆ ಸಮೀಪದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 28ನೇ ನುಡಿಹಬ್ಬದಲ್ಲಿ ಡಾ. ಹಣಮಂತ ಗೋವಿಂದಪ್ಪ ದಡ್ಡಿ (ವೈದ್ಯಕೀಯ ಕ್ಷೇತ್ರ) ಹಾಗೂ ವೂಡೇ ಪಿ. ಕೃಷ್ಣ (ಶಿಕ್ಷಣ ಕ್ಷೇತ್ರ) ಅವರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ನಾಡೋಜ ಗೌರವ ಪದವಿ ಪ್ರದಾನ ಮಾಡಿದರು. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಪ್ರೊ.ಎಸ್‌.ಸಿ. ಶರ್ಮಾ, ಕುಲಪತಿ ಪ್ರೊ.ಸ.ಚಿ. ರಮೇಶ ಹಾಗೂ ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ ಚಿತ್ರದಲ್ಲಿ ಇದ್ದಾರೆಚಿತ್ರ: ಕೆ.ಎಂ. ಕೊಟ್ರೇಶ್‌   

ಕಮಲಾಪುರ (ಹೊಸಪೇಟೆ ತಾಲ್ಲೂಕು): ‘ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಅಶೋಕ್‌ ಕುಮಾರ್‌ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಅವರು ಏನಾದರೂ ಪತ್ರ ಬರೆದಿದ್ದಾರೆಯೇ’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಶ್ನಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 28ನೇ ನುಡಿಹಬ್ಬದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಅಶೋಕ್‌ ಕುಮಾರ್‌ ಅವರು ಬರೆದಿಟ್ಟ ಆತ್ಮಹತ್ಯೆ ಪತ್ರ ಈಗಾಗಲೇ ಪೊಲೀಸರಿಗೆ ಸಿಕ್ಕಿದೆ. ಡಿ.ಕೆ.ಶಿವಕುಮಾರ ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ.ಮನಬಂದಂತೆ ಹೇಳಿಕೆ ಕೊಡಬಾರದು. ಅಶೋಕ್‌ ಕುಮಾರ್‌ ಬರೆದಿಟ್ಟ ಪತ್ರದಲ್ಲಿ ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಬಿಜೆಪಿ ಸರ್ಕಾರ ಕಾಂಗ್ರೆಸ್‌ನಂತೆ ಕೆಲಸ ಮಾಡುತ್ತಿಲ್ಲ. ನಮ್ಮ ಸರ್ಕಾರ ಭಿನ್ನವಾಗಿ ಕೆಲಸ ಮಾಡುತ್ತಿರುವುದಕ್ಕೆ ಅವರಿಗೆ ಬೇಜಾರಿದೆ. ಹೀಗಾಗಿಯೇ ಏನೇನೋ ಆರೋಪ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣ ಪಾರದರ್ಶಕತೆ ತಂದಿದ್ದೇವೆ. ಭ್ರಷ್ಟಾಚಾರ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. ಇಲಾಖೆಯಲ್ಲಿ ಒಂದೇ ಒಂದು ಕಡತ ಬಾಕಿ ಇಲ್ಲ. ಸಮಿತಿಗಳ ಮೂಲಕ ಅರ್ಹರಾದವರನ್ನು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಿ ನೇಮಕ ಮಾಡಲಾಗುತ್ತಿದೆ. ವರ್ಗಾವಣೆ, ಬಡ್ತಿ ಸೇರಿದಂತೆ ಎಲ್ಲ ಕೆಲಸಗಳು ಪಾರದರ್ಶಕವಾಗಿ ನಡೆಯುತ್ತಿವೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಂದೇ ಒಂದು ತಪ್ಪು ಆಗಿಲ್ಲ. ಅದಕ್ಕೆ ಅವಕಾಶವೂ ಮಾಡಿಕೊಡುವುದಿಲ್ಲ’ ಎಂದು ತಿಳಿಸಿದರು.

ಯತ್ನಾಳ ಬಹಿರಂಗ ಹೇಳಿಕೆ ಒಳ್ಳೆಯದಲ್ಲ:

‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡುವುದು ಒಳ್ಳೆಯದಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಯತ್ನಾಳ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಒಕ್ಕಲಿಗರ ನಾಯಕ ಆಗುವುದು ನಮ್ಮ ಕೆಲಸದ ಮೂಲಕ. ಜನಪರ, ನಿಸ್ವಾರ್ಥದಿಂದ ಕೆಲಸ ಮಾಡಿದರೆ ಜನ ನಮ್ಮನ್ಮು ಗುರುತಿಸುತ್ತಾರೆ. ಜನಪ್ರತಿನಿಧಿಗಳನ್ನು ಎಲ್ಲ ವರ್ಗದವರು ಸೇರಿಕೊಂಡು ಆಯ್ಕೆ ಮಾಡುತ್ತಾರೆ. ಕುಟುಂಬಕ್ಕೆ ಸೀಮಿತರಾಗಿ, ಸ್ವಾರ್ಥದಿಂದ ಕೆಲಸ ಮಾಡುವ ರಾಜಕಾರಣಿಗಳು ಸಮಾಜಕ್ಕೆ ಬೇಕಿಲ್ಲ. ಬಿಜೆಪಿಯಲ್ಲಿ ಜಾತಿ ಆಧಾರಿತ ರಾಜಕೀಯ ಇಲ್ಲ. ಆ ತರಹದ ರಾಜಕೀಯವೂ ನಾವೂ ಮಾಡಲ್ಲ’ ಎಂದು ಒಕ್ಕಲಿಗ ನಾಯಕತ್ವದ ಕುರಿತ ಪ್ರಶ್ನೆಗೆ ಉತ್ತರಿಸಿದರು.

‘ರಾಜ್ಯದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಲೋಕಸಭೆಯ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿಸಿದಂತೆ ಫಲಿತಾಂಶ ಬರುತ್ತಿದೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರುತ್ತಿಲ್ಲ. ಎಲ್ಲ ಕಡೆ ಪಕ್ಷ ಗೆಲ್ಲಲು ಶ್ರಮಿಸಲಾಗುವುದು’ ಎಂದು ಹೇಳಿದರು

‘ನಮ್ಮ ಪಕ್ಷ ಮಾಡುವ ಒಳ್ಳೆಯ ಕೆಲಸ ಆಧರಿಸಿ ಚುನಾವಣೆಗೆ ಸ್ಪರ್ಧಿಸುತ್ತೇವೆ ಹೊರತು ವ್ಯಕ್ತಿಗತವಾಗಿ ಚುನಾವಣೆ ಎದುರಿಸುವುದಿಲ್ಲ. ವ್ಯಕ್ತಿಗೆ ಸೀಮಿತವಾದ ಪಕ್ಷ ನಮ್ಮದಲ್ಲ. ಇತರೆ ಮುಖಂಡರಂತೆ ವಿಜಯೇಂದ್ರ ಅವರು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ಮಾರ್ಗಸೂಚಿ ಪ್ರಕಾರ ಕಾಲೇಜು ಆರಂಭ:

‘ಒತ್ತಾಯ ಇದ್ದ ಕಾರಣ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಯುಜಿಸಿಯ ಮಾರ್ಗದರ್ಶನದ ಪ್ರಕಾರ ಕಾಲೇಜುಗಳನ್ನು ನಡೆಸಲಾಗುವುದು. ಇಚ್ಛೆ ಇರುವ ವಿದ್ಯಾರ್ಥಿಗಳು ಕಾಲೇಜಿಗೆ ಬರಬಹುದು. ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಅದರ ಪ್ರಮಾಣ ಪತ್ರದೊಂದಿಗೆ ಹಾಜರಾಗಬೇಕು. ರಾಜ್ಯದಾದ್ಯಂತ ಉಚಿತವಾಗಿ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.