ADVERTISEMENT

‘ನನಗಿಂತ ದೇಶದ ಆರೋಗ್ಯ ಮುಖ್ಯ’

ಪ್ರದೀಶ್ ಎಚ್.ಮರೋಡಿ
Published 7 ಮಾರ್ಚ್ 2019, 19:30 IST
Last Updated 7 ಮಾರ್ಚ್ 2019, 19:30 IST
ಭವಾನಿ ಸುಕುಮಾರ್
ಭವಾನಿ ಸುಕುಮಾರ್   

ಮಂಗಳೂರು: ‘ಸುಕುಮಾರ್‌ ಎರಡು ವರ್ಷ ಇರುವಾಗಲೇ ಆತನ ತಂದೆ ಲಕ್ಷ್ಮಣ ಪೂಜಾರಿ ತೀರಿಕೊಂಡರು. ಚಿಕ್ಕಂದಿನಲ್ಲಿ ಬಡತನ ಇದ್ದುದರಿಂದ ಕಡಲೆ ಮತ್ತು ಬೆಲ್ಲ ತಿಂದು ಎಷ್ಟೋ ದಿನ ಕಳೆದಿದ್ದೇವೆ. ಮನೆ ಮನೆಗೆ ಪೇಪರ್‌, ಹಾಲು ಹಾಕಿ ಓದಿದ ಹುಡುಗ. ಮಗನಿಗೆ ದೇಶ ಸೇವೆಯ ಹುಮ್ಮಸ್ಸು ಇತ್ತು. ಆದರೆ, ಅವನು ಸೇನೆಗೆ ಸೇರುವುದಕ್ಕೆ ನಾನು ಅಂದು ಒಪ್ಪಿರಲಿಲ್ಲ. ಇಂದು ಅವನು ಪುಲ್ವಾಮಾದಲ್ಲೇ ಕರ್ತವ್ಯದಲ್ಲಿದ್ದಾನೆ. ದೇಶಕ್ಕಾಗಿ ಬಲಿದಾನ ಮಾಡಿದ 40 ವೀರ ಯೋಧರ ರಕ್ತ ಚೆಲ್ಲಿದ ನೆಲದಲ್ಲೇ ದೇಶ ಸೇವೆ ಮಾಡುತ್ತಿದ್ದಾನೆ. ನನಗೆ ಈಗ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ...’

ಈ ಮಾತನ್ನು ಆಡಿದ್ದು ಪುಲ್ವಾಮಾ ದಲ್ಲಿ ಇದೀಗ ಹವಾಲ್ದಾರ್‌ ಹುದ್ದೆಯಲ್ಲಿರುವ ಯೋಧ ಸುಕುಮಾರ್‌ ಅವರ ತಾಯಿ ಭವಾನಿ. ಮಂಗಳೂರು ನಗರದ ದೇರೆಬೈಲಿನ ಕಾಡ್ಜಿಹಿತ್ಲುವಿನಲ್ಲಿ ದೊಡ್ಡ ಮಗನ ಜತೆ ನೆಲೆಸಿರುವ ಅವರಿಗೆ ಕಾಡುತ್ತಿರುವ ಚಿಂತೆ ಮಗನದಲ್ಲ, ಬದಲಿಗೆ ತಮ್ಮ ಅನಾರೋಗ್ಯದ್ದು.

‘ಈಗಾಗಲೇ ಮೂರ್ನಾಲ್ಕು ಶಸ್ತ್ರಚಿಕಿತ್ಸೆಗಳು ನಡೆದಿವೆ. ಎಲ್ಲದಕ್ಕೂ ಮಗನ ಸಂಬಳದಿಂದಲೇ ಖರ್ಚು ಭರಿಸಿದ್ದೇನೆ. ನನಗೆ ಉಚಿತ ವೈದ್ಯಕೀಯ ನೆರವು ಬೇಕಿದ್ದರೆ ನಾನು ಬೆಂಗಳೂರಿನಲ್ಲಿರುವ ಸೇನಾ ಆಸ್ಪತ್ರೆಗೇ ಹೋಗಬೇಕೆಂತೆ. ಅದು ನನ್ನಿಂದ ಸಾಧ್ಯವೇ. ನನ್ನ ಮಗನ ದುಡಿಮೆಯ ದುಡ್ಡೆಲ್ಲ ನನ್ನ ಚಿಕಿತ್ಸೆಗೇ ವ್ಯಯವಾಗುತ್ತಿದೆ. ಬದುಕು ಇಷ್ಟೇ ಅಲ್ಲವಲ್ಲ... ಎಂದು ಹೇಳುತ್ತ ತಮ್ಮ 3 ಸೆಂಟ್ಸ್‌ ಜಾಗ, ಶಿಥಿಲ ಮನೆಯನ್ನು ತೋರಿಸಿದರು. ಅವರ ಪುತ್ರಿಗೆ ಮದುವೆಯಾಗಿದೆ, ಹಿರಿಯ ಪುತ್ರನಂತೆ ಸುಕುಮಾರ್‌ಗೂ ಮದುವೆಯಾಗಿಲ್ಲ.

ADVERTISEMENT

ಸುಕುಮಾರ್‌ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಉತ್ತರಪ್ರದೇಶ, ಅಸ್ಸಾಂ, ಲಡಾಕ್‌, ಸಿಯಾಚಿನ್‌, ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಕಳೆದ ಅಕ್ಟೋಬರ್‌ನಲ್ಲಿ ಊರಿಗೆ ಬಂದಿದ್ದರು. ಫೆ.14ರಂದು ಪುಲ್ವಾಮಾದಲ್ಲಿ ದಾಳಿ ನಡೆದ ಬಳಿಕ ಅವರನ್ನು ಇದೀಗ ಅದೇ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

‘ಫೆ.14ರಂದು ಸಂಜೆಯೇ ನಾನು ಭಯದಲ್ಲಿ ಮಗನಿಗೆ ಫೋನ್‌ ಮಾಡಿದ್ದೆ. ಆಚೆಯಿಂದ ಉತ್ತರ ಬರಲಿಲ್ಲ. ಒಂದು ವಾರದ ಬಳಿಕ ಆತನಿಂದ ಕರೆ ಬಂತು. ಆ ಒಂದು ವಾರ ನಾನು ಅನುಭವಿಸಿದ ಪಾಡು ಹೇಳತೀರದು. ಆದರೂ ಆತ ಮಾಡುತ್ತಿರುವುದು ದೇಶ ರಕ್ಷಣೆಯ ಕೆಲಸ. ಹೀಗಾಗಿಯೇ ಅವನು ಎಲ್ಲೇ ಇದ್ದರೂ ಅಮ್ಮನಿಗಿಂತಲು ಮಿಗಿಲಾಗಿ ದೇಶವನ್ನು ನೆಚ್ಚಿಕೊಂಡಿರುತ್ತಾನೆ ಎಂಬ ಬಲವಾದ ನಂಬಿಕೆ ನನಗಿದೆ. ನನ್ನ ಆರೋಗ್ಯದ ಕಾಳಜಿ ನೋಡಿಕೊಳ್ಳುತ್ತಿರುವ ಅವನಿಗೆ ದೇಶದ ಕಾಳಜಿ ದೊಡ್ಡದಿದೆ ಎಂಬುದು ನನಗೆ ಗೊತ್ತಿದೆ. ಅದೇ ಸಮಾಧಾನದಿಂದ ಇದ್ದುದರಲ್ಲಿ ಖುಷಿಯಿಂದ ಇರಲು ಪ್ರಯತ್ನಿಸುತ್ತಿದ್ದೇನೆ...’ ಎನ್ನುವಾಗ ಮಾತೃಹೃದಯದ ದರ್ಶನ ಆಗದೆ ಇರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.