ADVERTISEMENT

ಸುಮಲತಾ ಮೇಡಂ ಎಲ್ಲಿದ್ದೀರಿ?: ಮಳೆ ಸಂತ್ರಸ್ತರ ಕಷ್ಟ ಕೇಳದ ಸಂಸದೆ ವಿರುದ್ಧ ಆಕ್ರೋಶ

ಪರಿಹಾರ ಕೊಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 8:43 IST
Last Updated 29 ಅಕ್ಟೋಬರ್ 2019, 8:43 IST
   

ಕೆ.ಆರ್.ಪೇಟೆ: ‘ಭಾರಿ ಮಳೆಯಿಂದಾಗಿ ಕೆ.ಆರ್‌.ಪೇಟೆ ತಾಲ್ಲೂಕಿನ ಹಲವು ಮನೆಗಳು ಕುಸಿದು ಬಿದ್ದಿವೆ, ಬೆಳೆಗಳು ಕೊಚ್ಚಿ ಹೋಗಿವೆ. ಇಷ್ಟಾದರೂ ಸಂಸದರು ಸ್ಥಳಕ್ಕೆ ಭೇಟಿ ನೀಡಿ ಜನರ ಕಷ್ಟ ಕೇಳಿಲ್ಲ. ಹೀಗಾಗಿ ಸಾರ್ವಜನಿಕರು ಸುಮಲತಾ ಮೇಡಂ, ಎಲ್ಲಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ’ ಎಂದು ವೀರಶೈವ ಮಹಾಸಭಾ ಕೆ.ಆರ್‌.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯ ಅಸಮಾಧಾನ ಹೊರ ಹಾಕಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ತಾಲ್ಲೂಕಿನಲ್ಲಿ ಭಾರೀ ಮಳೆಯಿಂದ ಹಲವು ಕೆರೆಕೋಡಿ ಒಡೆದು 800 ಎಕರೆಗೂ ಹೆಚ್ಚು ಬೆಳೆ ನಷ್ಟವಾಗಿದೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಸಾವು- ನೋವು ಉಂಟಾಗಿದ್ದರೂ ಜಿಲ್ಲೆಯ ಸಂಸದೆಯಾಗಲಿ, ಉಸ್ತುವಾರಿ ಸಚಿವರಾಗಲಿ ಬಂದು ಪರಿಸ್ಥಿತಿಯ ಅವಲೋಕನ ನಡೆಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಿಖಿಲ್‌ ಕುಮಾರಸ್ವಾಮಿ ಅವರನ್ನು, ನಿಖಿಲ್‌ ಎಲ್ಲಿದ್ದೀಯಪ್ಪ ಎಂದು ಪ್ರಶ್ನಿಸಿ ತಮಾಷೆ ಮಾಡುತ್ತಿದ್ದರು. ಆದರೆ ಈಗ ಸಂಸದರನ್ನು, ಸುಮಲತಾ ಮೇಡಂ ಎಲ್ಲಿದ್ದೀರಿ ಎಂದು ಪ್ರಶ್ನಿಸುವಂತಾಗಿದೆ’ ಎಂದರು.

ADVERTISEMENT

‘ಸ್ವಾಭಿಮಾನದ ಹೆಸರಿನಲ್ಲಿ ಗೆದ್ದ ಸಂಸದೆ ಸುಮಲತಾ ಅವರು ಈವರೆಗೂ ತಾಲ್ಲೂಕಿನಲ್ಲಿ ಪ್ರವಾಸ ಮಾಡಿಲ್ಲ. ಕಾಟಾಚಾರದ ಒಂದು ಸಭೆ ನಡೆಸಿ ಹೋಗಿದ್ದಾರೆ. ಮಳೆಯಿಂದ ಹಾನಿಯಾಗಿ ವಾರ ಕಳೆದರೂ ಅವರು ಈವರೆಗೂ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವ ಆರ್.ಅಶೋಕ್ ಕೂಡ ಬಂದಿಲ್ಲ. ಬಡವರ ನೋವಿಗೆ ಯಾರೂ ಸ್ಪಂದನೆ ನೀಡಿಲ್ಲ. ಇವರಿಗೆಲ್ಲಾ ಅಧಿಕಾರ ಏಕೆ ಬೇಕು’ ಎಂದು ಪ್ರಶ್ನಿಸಿದರು.

‘ತಹಶೀಲ್ದಾರ್‌ ಸಕಾಲಿಕವಾಗಿ ಕ್ರಮ ತೆಗೆದುಕೊಂಡಿದ್ದನ್ನು ಬಿಟ್ಟರೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಾಗಲೀ, ಉಪವಿಭಾಗಾಧಿಕಾರಿ ಶೈಲಜಾ ಅವರಾಗಲೀ ತಾಲ್ಲೂಕಿನ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿಲ್ಲ’ ಎಂದರು.

ತಾಲ್ಲೂಕಿನ ಸೂಜಿಗಲ್ಲುಗುಡ್ಡದಕೆರೆ, ಸಿಂದಘಟ್ಟ ಕೆರೆ, ಹರಳಹಳ್ಳಿ ಕೆರೆ ಕೋಡಿಗಳು ಒಡೆದು 800 ಎಕರೆ ಕೃಷಿಭೂಮಿಯಲ್ಲಿ ಬೆಳೆದಿದ್ದ ಭತ್ತ, ಕಬ್ಬು, ಬಾಳೆ ಮತ್ತು ಅಡಿಕೆ ಬೆಳೆ ಕೊಚ್ಚಿ ಹೋಗಿವೆ. ₹ 15 ಕೋಟಿಗೂ ಹೆಚ್ಚಿನ ನಷ್ಟವಾಗಿದೆ. ಗಂಜಿಗೆರೆಯಲ್ಲಿ ಮನೆಯ ಗೋಡೆಬಿದ್ದು ಮುರುಕನಹಳ್ಳಿ ಕುಮಾರ್ ಮೃತಪಟ್ಟಿದ್ದಾರೆ’ ಎಂದರು.

‘ಸಂಸದರು ಕೂಡಲೇ ತಾಲ್ಲೂಕಿಗೆ ಭೇಟಿ ನೀಡಿ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ರಾಷ್ಟ್ರಪತಿ, ಪ್ರಧಾನಿ, ಲೋಕಸಭೆ ಸ್ಪೀಕರ್‌ಗೆ ದೂರು ನೀಡಲಾಗುವುದು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಡಿ.ಸಿ.ಕುಮಾರ್ , ಸಂತ್ರಸ್ತರಾದ ಹೊಸಹೊಳಲು ಸರಸ್ವತಮ್ಮ, ರಾಮಕೃಷ್ಣ, ತಿಮ್ಮೇಗೌಡ, ರೇವಣ್ಣ, ವೀರಪ್ಪ, ದಿನೇಶ್, ಮೋದೂರು ಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.