ADVERTISEMENT

ಮಂಡ್ಯ‌ ಲೋಕಸಭಾ ಕ್ಷೇತ್ರ: ಡಿಕೆಶಿ ಮಧ್ಯಸ್ಥಿಕೆ

ಸುಮಲತಾ ಅಂಬರೀಷ್‌ಗೆ ಸ್ಥಳೀಯ ಮುಖಂಡರ ಬೆಂಬಲ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 19:15 IST
Last Updated 9 ಮಾರ್ಚ್ 2019, 19:15 IST
   

ಬೆಂಗಳೂರು: ಮಂಡ್ಯ‌ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ನಿರ್ಧರಿಸಿರುವ ಸುಮಲತಾ ಅಂಬರೀಷ್ ಅವರ ಬೆಂಬಲಕ್ಕೆ ನಿಂತಿರುವ ಪಕ್ಷದ ಸ್ಥಳೀಯ ನಾಯಕರಿಗೆ ಕಡಿವಾಣ ಹಾಕಲು ರಾಜ್ಯ ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ.

‌ಮಂಡ್ಯದಲ್ಲಿ ಪಕ್ಷದ ಮುಖಂಡರ ಜತೆ ಚರ್ಚಿಸುವಂತೆ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಜವಾಬ್ದಾರಿ ನೀಡಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿರುವ ಅವರು ಭಾನುವಾರ ಸಂಜೆ 5ಕ್ಕೆ, ಮಂಡ್ಯ ಜಿಲ್ಲಾ ಮುಖಂಡರು, ಪದಾಧಿಕಾರಿಗಳು ಮತ್ತು ಮಾಜಿ ಶಾಸಕರ ಸಭೆ ಕರೆದಿದ್ದಾರೆ.

‘ಮೈತ್ರಿ’ ಸೂತ್ರದಂತೆ ಜೆಡಿಎಸ್‌ಗೆ ಮಂಡ್ಯ ಬಿಟ್ಟು ಕೊಡಲಾಗಿದೆ. ನಿಖಿಲ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಜೆಡಿಎಸ್ ಚಿಂತಿಸಿದೆ. ಸ್ಥಳೀಯ ಕೆಲವು ಕಾಂಗ್ರೆಸ್ ನಾಯಕರು ಸುಮಲತಾ ಪರ ನಿಂತಿರುವುದು ಎರಡೂ ಪಕ್ಷಗಳ ಚಿಂತೆಗೆ ಕಾರಣವಾಗಿದೆ. ಹೀಗಾಗಿ, ಸ್ಪಷ್ಟ ಸಂದೇಶ ಕೊಡಲು ಪ್ರಯತ್ನಿರುವ ಜೆಡಿಎಸ್‌ ನಾಯಕರು, ಕಾಂಗ್ರೆಸ್ ಹೈಕಮಾಂಡ್ ಮೂಲಕ ಆ ಪಕ್ಷದವರಿಗೆ ಮೂಗುದಾರ ತೊಡಿಸಲು ತೀರ್ಮಾನಿಸಿದ್ದಾರೆ.

ADVERTISEMENT

ಸುಮಲತಾ ಬೆನ್ನಿಗೆ ಬಿಜೆಪಿ?

‍ಬಿಜೆಪಿಗೆ ಬರಲೊಪ್ಪದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿಶ್ಚಯಿಸಿರುವ ಸುಮಲತಾ ಅಂಬರೀಷ್ ಬೆನ್ನಿಗೆ ನಿಲ್ಲುವ ಬಗ್ಗೆ ಕಮಲ ಪಕ್ಷದ ಮುಖಂಡರು ಚರ್ಚೆ ನಡೆಸಿದ್ದಾರೆ.

ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ ನಾಯಕರು (ಹಿಂದೆ ಜೆಡಿಎಸ್‌ನಲ್ಲಿದ್ದ ಕೆಲವರು ಸೇರಿ) ಅಸಮಾಧಾನ ಹೊಂದಿದ್ದಾರೆ. ಅಂಬರೀಷ್ ಬೆಂಬಲಿಗರ ಜತೆಗೆ, ಗೌಡರ ವಿರೋಧಿ ಮತಗಳು ಕ್ರೋಡೀಕರಣಗೊಂಡರೆ ಸುಮಲತಾಗೆ ಹೆಚ್ಚಿನ ಬಲ ಬರಲಿದೆ. ಇದರ ಜತೆಗೆ ತಮ್ಮ ಪಕ್ಷದ ಸಾಂಪ್ರದಾಯಿಕ ಮತಗಳು ಸೇರಿದರೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕ.

ಅಮಿತ್ ಶಾ ಅವರನ್ನು ಶುಕ್ರವಾರ ಭೇಟಿಯಾಗಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಈ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.