ADVERTISEMENT

ಶಾಸಕರ ಆಪ್ತರಿಂದ ಹಫ್ತಾ ವಸೂಲಿ: ಲಹರ್‌ ಸಿಂಗ್‌ ಸಿರೋಯ ಆರೋಪ

ವಿಧಾನ ಪರಿಷತ್‌ನಲ್ಲಿ ಲಹರ್‌ ಸಿಂಗ್‌ ಸಿರೋಯ ಆರೋಪ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 17:13 IST
Last Updated 22 ಮಾರ್ಚ್ 2021, 17:13 IST
ವಿಧಾನ ಪರಿಷತ್‌–ಸಾಂದರ್ಭಿಕ ಚಿತ್ರ
ವಿಧಾನ ಪರಿಷತ್‌–ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಶಾಸಕರ (ಎಂಎಲ್‌ಎ) ಆಪ್ತರು ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡವರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿಯೇ ಪಾದಚಾರಿ ಮಾರ್ಗಗಳ ಅತಿಕ್ರಮಣ ಅವ್ಯಾಹತವಾಗಿ ನಡೆಯುತ್ತಿದೆ’ ಎಂದು ಬಿಜೆಪಿಯ ಲಹರ್‌ ಸಿಂಗ್‌ ಸಿರೋಯ ಸೋಮವಾರ ವಿಧಾನ ಪರಿಷತ್‌ನಲ್ಲಿ ಆರೋಪಿಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬೆಂಗಳೂರು ಜನಸ್ನೇಹಿ ನಗರ ಎಂಬ ವರದಿ ಬಂದಿದೆ. ಆದರೆ, ಪಾದಚಾರಿ ಮಾರ್ಗಗಳಲ್ಲಿ ಜಾಗವಿಲ್ಲದೆ ಜನರು ರಸ್ತೆಯ ಮೇಲೆ ನಡೆಯುವಂತಾಗಿದೆ. ಇತ್ತೀಚೆಗೆ ಮೂವರು ಟ್ಯಾಂಕರ್‌ ಗುದ್ದಿ ಮೃತಪಟ್ಟಿದ್ದಾರೆ. ಇದಕ್ಕೆಲ್ಲ ಎಂಎಲ್‌ಎಗಳ ಆಪ್ತರ ಹಫ್ತಾ ವಸೂಲಿಯೇ ಕಾರಣ’ ಎಂದು ದೂರಿದರು.

ಹುಕ್ಕಾ ಬಾರ್‌ಗಳನ್ನು ನಿಷೇಧಿಸುವುದಾಗಿ ಗೃಹ ಸಚಿವರು ಹೇಳುತ್ತಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಸಚಿವರ ಮೇಲೆ ಆರೋಪ ಬಂದಿದೆ. ಇಲ್ಲಿಯೂ ಅಂತಹ ಕ್ರಮ ಕೆಲವರು ಹಣ ವಸೂಲಿಗೆ ಅವಕಾಶ ನೀಡುವುದಕ್ಕೆ ಕಾರಣವಾಗಬಾರದು ಎಂದು ಹೇಳಿದರು.

ADVERTISEMENT

ಬಡವರಿಗೆ ನೆರವು ನೀಡಿ: ‘ಬಜೆಟ್‌ನಲ್ಲಿ ಜಾತಿ ಆಧಾರಿತವಾಗಿ ಅನುದಾನ ನಿಗದಿ ಮಾಡುವುದಕ್ಕಿಂತ ಬಡವರಿಗಾಗಿ ಹೆಚ್ಚು ಹಣ ಮೀಸಲಿಡಬೇಕು. ಎಲ್ಲ ಬಡವರಿಗೂ ತಲುಪಬೇಕು. ಯಾವ ಪಕ್ಷದ ಸರ್ಕಾರಗಳೂ ಈ ದಿಸೆಯಲ್ಲಿ ಕೆಲಸ ಮಾಡುತ್ತಿಲ್ಲ’ ಎಂದು ಲಹರ್‌ ಸಿಂಗ್‌ ಸಿರೋಯ ಆಕ್ಷೇಪಿಸಿದರು.

‘ನಗರದಲ್ಲಿನ ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಹೆಚ್ಚು ಅನುದಾನ ಒದಗಿಸಬೇಕು. ಶಾಸಕರು, ಸಂಸದರು ಮತ್ತು ಅವರ ಕುಟುಂಬದವರು ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುವುದನ್ನು ಕಡ್ಡಾಯ ಮಾಡಬೇಕು. ನಾನು ಮತ್ತು ನನ್ನ ಕುಟುಂಬ ಯಾವತ್ತೂ ಖಾಸಗಿ ಆಸ್ಪತ್ರೆಗೆ ಹೋಗುವುದಿಲ್ಲ. ವಿಕ್ಟೋರಿಯಾ ಮತ್ತು ಬೌರಿಂಗ್‌ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುತ್ತೇವೆ. ಅಲ್ಲಿನ ಸ್ತಿತಿ ಕಂಡು ಬೇಸರವಾಗುತ್ತದೆ’ ಎಂದರು.

‘ಕೋವಿಡ್‌ ಹೆಸರಲ್ಲಿ ಭ್ರಷ್ಟಾಚಾರ’: ಜೆಡಿಎಸ್‌ನ ಎಚ್‌.ಎಂ. ರಮೇಶ್‌ ಗೌಡ ಮಾತನಾಡಿ, ‘ಕೋವಿಡ್‌ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚರ ನಡೆದಿದೆ. ಸೋಂಕಿನಿಂದ ಮೃತಪಟ್ಟಿರುವ ಕೋವಿಡ್‌ ವಾರಿಯರ್‌ಗಳ ಪೈಕಿ ಒಬ್ಬರ ಕುಟುಂಬಕ್ಕೂ ಈವರೆಗೆ ₹ 30 ಲಕ್ಷ ಪರಿಹಾರ ನೀಡಿಲ್ಲ. ಕೋವಿಡ್‌ ಆರೈಕೆ ಕೇಂದ್ರದ ಹೆಸರಿನಲ್ಲೂ ಸರ್ಕಾರದ ಹಣ ಲೂಟಿಗೆ ಪ್ರಯತ್ನ ನಡೆಯಿತು’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.