ADVERTISEMENT

ನ್ಯಾಯಾಂಗ ಅಧಿಕಾರಿಗಳ ನೇಮಕಾತಿ: ಸು‍‍ಪ್ರೀಂ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 15:42 IST
Last Updated 17 ಫೆಬ್ರುವರಿ 2026, 15:42 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಕರ್ನಾಟಕದಲ್ಲಿ ನ್ಯಾಯಾಂಗ ಅಧಿಕಾರಿಗಳ (ಸಿವಿಲ್ ನ್ಯಾಯಾಧೀಶರು) ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಮಲಿಕ್‌ ಮಜರ್ ಸುಲ್ತಾನ್‌ ಹಾಗೂ ಉತ್ತರ ‍ಪ್ರದೇಶ ಲೋಕಸೇವಾ ಆಯೋಗದ ನಡುವಿನ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಹಾಗೂ ವಿಪುಲ್‌ ಪಂಚೋಲಿ ಅವರ ಪೀಠವು ಈ ನಿರ್ದೇಶನ ನೀಡಿದೆ. 

ಕರ್ನಾಟಕ ಸಿವಿಲ್ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫಲಿತಾಂಶವನ್ನು ಮಾತ್ರ ಘೋಷಿಸಬೇಕಾಗಿದೆ ಎಂದು ಪೀಠಕ್ಕೆ ತಿಳಿಸಲಾಯಿತು.

ADVERTISEMENT

ಇದನ್ನು ಪರಿಗಣಿಸಿದ ಪೀಠವು, ‘ನ್ಯಾಯಾಂಗ ಅಧಿಕಾರಿಗಳ ನೇಮಕಾತಿ‍ ಪ್ರಕ್ರಿಯೆ ಪೂರ್ಣಗೊಳಿಸುವ ಸ್ವಾತಂತ್ರ್ಯ ಹೈಕೋರ್ಟ್‌ಗೆ ಇದೆ’ ಎಂದು ಆದೇಶಿಸಿತು.

ಕರ್ನಾಟಕ ಸರ್ಕಾರವು 2024ರ ನವೆಂಬರ್‌ 15ರಂದು ‘ಕರ್ನಾಟಕ ನ್ಯಾಯಾಂಗ ಸೇವೆ (ನೇಮಕಾತಿ) (ತಿದ್ದುಪಡಿ) ನಿಯಮಗಳು– 2024’ ಜಾರಿಗೆ ತಂದಿತ್ತು. ಮೀಸಲಾತಿಗಳಿಗೆ ತಿದ್ದುಪಡಿ ತಂದಿದ್ದರಿಂದ ನೇರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. 158 ನ್ಯಾಯಾಂಗ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ 2025ರ ಫೆಬ್ರುವರಿಯಲ್ಲಿ ನಿರ್ದೇಶನ ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.