ADVERTISEMENT

ಸುಪ್ರೀಂ ಕೋರ್ಟ್ ಸಮಿತಿ: ರೈತರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 17:07 IST
Last Updated 14 ಜನವರಿ 2021, 17:07 IST

ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ಮುಷ್ಕರನಿರತ ರೈತ ಸಂಘಟನೆಗಳ ನಡುವೆ ಮಧ್ಯಸ್ತಿಕೆ ವಹಿಸಲು ಸುಪ್ರೀಂಕೋರ್ಟ್‌ ರಚಿಸಿರುವ ನಾಲ್ವರು ಸದಸ್ಯರ ಸಮಿತಿಗೆ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ ನೀಡಿರುವ ತಡೆಯಾಜ್ಞೆ ಕೇವಲ ರಾಜಕೀಯ ಉದ್ದೇಶವನ್ನು ಹೊಂದಿದೆ. ‘ರೈತರ ಶಾಂತಿಯುತ ಪ್ರತಿಭಟನೆ ಹತ್ತಿಕ್ಕಲು ಬಯಸುವುದಿಲ್ಲ. ಆದರೂ, ಈ ವಿಶೇಷ ಆದೇಶದ ಮೂಲಕ ವಿವಾದಿತ ಕೃಷಿ ಮಸೂದೆಗಳ ಅನುಷ್ಠಾನಕ್ಕೆ ತಡೆಯೊಡ್ಡುವ ಮೂಲಕ ಈ ಪ್ರತಿಭಟನೆಯ ಉದ್ದೇಶ ತಾತ್ಕಾಲಿಕವಾಗಿಯಾದರೂ ಸಾಧನೆಯಾಗಿರುವ ಸಂದೇಶವನ್ನು ನೀಡುತ್ತಿದ್ದೇವೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ‘ಇದರಲ್ಲಿ ರೈತರು ಮುಷ್ಕರ ಕೈಬಿಡಬೇಕು ಎನ್ನುವ ಇಂಗಿತ ಎದ್ದು ಕಾಣುತ್ತಿದೆ’ ಎಂದು ಐಕ್ಯ ಹೋರಾಟ ಸಮಿತಿಯ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

‘ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯ ನಾಲ್ವರು ಸದಸ್ಯರು ಸಾರ್ವಜನಿಕವಾಗಿಯೇ ಹೊಸ ಕೃಷಿ ಮಸೂದೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಈ ಸಮಿತಿಯು ಸರ್ಕಾರದ ಪರ ಧೋರಣೆ ಹೊಂದುವ ಸಾಧ್ಯತೆಗಳು ಸ್ಪಷ್ಟವಾಗಿ ಕಾಣುತ್ತಿವೆ. ಯಾವುದೇ ರೀತಿಯ ನಿಷ್ಪಕ್ಷಪಾತ ನೀತಿಯನ್ನೂ ಈ ಸಮಿತಿಯಿಂದ ನಿರೀಕ್ಷಿಸಲಾಗುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಕೇಂದ್ರದ ಮೂರು ಹೊಸ ಕಾನೂನುಗಳು ಕೃಷಿ ಸಂಸ್ಕರಣೆ, ಮಾರುಕಟ್ಟೆಗಳ ಮೇಲೆ ಕಾರ್ಪೊರೇಟ್ ನಿಯಂತ್ರಣಕ್ಕೆ ಕಾರಣವಾಗುತ್ತವೆ ಎಂದು ರೈತರು ಸರ್ಕಾರಕ್ಕೆ ವಿವರವಾಗಿ ವಿವರಿಸಿದ್ದಾರೆ. ಇವುಗಳನ್ನು ರದ್ದುಗೊಳಿಸುವ ತನಕ ಮುಷ್ಕರ ಮುಂದುವರಿಸುವ ನಿರ್ಧಾರವನ್ನು ರೈತ ಸಂಘಟನೆಗಳು ಮಾಡಿವೆ. ಗಣರಾಜ್ಯೋತ್ಸವದಂದು ರೈತ ಸಂಘಟನೆಗಳು ಘೋಷಿಸಿದ ಕಿಸಾನ್ ಪೆರೇಡ್‌ನಲ್ಲಿ ದೆಹಲಿ ಮತ್ತು ದೇಶದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ಪಾಲ್ಗೊಳ್ಳುತ್ತಾರೆ. ದೇಶದ ಸಮಸ್ತ ಜನತೆಯೂ ಈ ಮುಷ್ಕರನಿರತ ರೈತರಿಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.