
ನವದೆಹಲಿ: ಬೆಂಗಳೂರಿನಲ್ಲಿ ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ 10ರ ಬದಲು 16 ಅಂತಸ್ತು ನಿರ್ಮಿಸಿಕೊಳ್ಳಲು ಪ್ರೀಮಿಯಂ ಎಫ್‌ಎಆರ್‌ಗೆ (ಫ್ಲೋರ್ ಏರಿಯಾ ರೇಷಿಯೊ) ಅನುಮತಿಸುವ ಕರ್ನಾಟಕ ಸರ್ಕಾರದ ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಎಂಟು ವಾರಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿತು.
ಕೃಷ್ಣಮೂರ್ತಿ ಎನ್. ಎಂಬವರು ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಜಾಯ್‌ಮಲ್ಯ ಬಾಗ್ಚಿ ಪೀಠವು, ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಿತು.
ರಿಟ್ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಡೆವಲಪರ್ ಥರ್ಡ್ ಪಾರ್ಟಿ ಹಕ್ಕುಗಳನ್ನು ರಚಿಸುವಂತಿಲ್ಲ ಎಂಬ ಷರತ್ತಿಗೆ ಒಳಪಟ್ಟಂತೆ ಪಿಎಫ್‌ಎಆರ್ ಯೋಜನೆಗಳಿಗೆ ಮಂಜೂರಾತಿ ನೀಡಬಹುದು ಎಂದು ಪೀಠ ಸೂಚಿಸಿತು.
‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ –2015’ರ ಸೆಕ್ಷನ್ 13–ಇಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿತ್ತು. ಪ್ರೀಮಿಯಂ ಎಫ್‌ಎಆರ್‌ಗಾಗಿ ಪರಿಷ್ಕೃತ ಮಾಸ್ಟರ್ ಪ್ಲಾನ್–2015ರ ವಲಯ ನಿಯಮಗಳಿಗೆ 11 ಅನ್ನು (ಪಿಎಫ್‌ಎಆರ್ ಅನುಮತಿಸಲು ಶುಲ್ಕಗಳ ವಿವರ) ಸೇರ್ಪಡೆ ಮಾಡಲಾಗಿತ್ತು. 2025ರ ಜನವರಿ 4ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಏಪ್ರಿಲ್ 4ರಂದು ಅಂತಿಮ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಹೊರಡಿಸಿತ್ತು. ಆದರೆ, ನ್ಯಾಯಾಲಯದಲ್ಲಿ ಅದಕ್ಕೆ ತಡೆಯಾಗಿತ್ತು. ದಾವೆಯನ್ನು ಹೈಕೋರ್ಟ್ ಡಿ.5ರಂದು ವಜಾಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.