
ಬೆಂಗಳೂರು: ‘ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ನಿಗದಿತ ದಿನದ ಒಳಗೆ ಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲಾಗುವುದು. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅರಮನೆ ಮೈದಾನ ಆವರಣದಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಮುಂದೆ ಪ್ರಮಾಣಪತ್ರ ಸಲ್ಲಿಸಿದೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯಬೇಕು’ ಎಂದರು.
ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ‘ಕೆಲವರು ಆಕ್ಷೇಪಣೆ ಸಲ್ಲಿಸುತ್ತಾರೆ. ಅದಕ್ಕೆ ಸಮಿತಿ ರಚಿಸಲಾಗಿದ್ದು, ಸಮಿತಿ ತೀರ್ಮಾನ ಮಾಡಲಿದೆ. ಮೀಸಲಾತಿ ವಿಚಾರವಾಗಿ ಮಹಿಳೆಯರಿಗೆ ಕಡಿಮೆಯಾಗಿದೆ ಎಂಬ ಮಾತು ಕೇಳಿಬಂದಿವೆ. ಇದನ್ನು ನಾನು ಗಮನಿಸಿಲ್ಲ. ತಪ್ಪಾಗಿದ್ದರೆ ಸರಿಪಡಿಸಲು ಅವರಿಗೆ ಸೂಚಿಸಲಾಗುವುದು. ನಾವು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.
‘ಚುನಾವಣೆ ನಡೆಸಲು ನ್ಯಾಯಾಲಯದ ಬಳಿ ಸಮಯ ಕೇಳುತ್ತೀರಾ’ ಎಂಬ ಪ್ರಶ್ನೆಗೆ ‘ಯಾವುದೇ ಕಾಲಾವಕಾಶ ಕೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಚುನಾವಣೆ ನಿಮ್ಮ ಪಾಲಿಗೆ ಸವಾಲಿನದ್ದಾಗಿದೆಯಲ್ಲವೇ?’ ಎಂದಾಗ, ‘ಚುನಾವಣೆ ನಡೆಸುವುದು ನಮ್ಮ ಕರ್ತವ್ಯ. ಕಾರ್ಯಕರ್ತರಿಗೆ ಅಧಿಕಾರ ಕೊಡುವುದು, ಹೊಸ ನಾಯಕರನ್ನು ತಯಾರು ಮಾಡುತ್ತಿದ್ದೇವೆ. ನಾವು ಮಾಡುತ್ತಿರುವ ಕೆಲಸಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ. ನಾವು ಐದೂ ಪಾಲಿಕೆಗಳಲ್ಲೂ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬಿಜೆಪಿ ಹಾಗೂ ಜೆಡಿಎಸ್ ಫ್ರೆಂಡ್ಲಿ ಫೈಟ್’ ವಿಚಾರವಾಗಿ ಕೇಳಿದಾಗ, ‘ಅವರು ಏನಾದರೂ ಮಾಡಿಕೊಳ್ಳಲಿ. ಜತೆಯಾಗಿಯಾದರೂ ಚುನಾವಣೆ ಮಾಡಲಿ, ಬೇರೆಯಾಗಿ ಬೇಕಾದರೂ ಮಾಡಲಿ. ಅವರು ಸಂಸತ್ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಎದುರಿಸಿದಂತೆ ವಿಧಾನಸಭೆ ಹಾಗೂ ಪಾಲಿಕೆ ಚುನಾವಣೆಯನ್ನು ಮಾಡಿದರೆ ನೇರ ಹಣಾಹಣಿ ಇರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.