ADVERTISEMENT

ಕೊಲೆ ಪ್ರಕರಣ: ಬೈರತಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:20 IST
Last Updated 12 ಫೆಬ್ರುವರಿ 2026, 6:20 IST
<div class="paragraphs"><p>ಬೈರತಿ ಬಸವರಾಜ್ ಮತ್ತು&nbsp; ಬಿಕ್ಲು ಶಿವ</p></div>

ಬೈರತಿ ಬಸವರಾಜ್ ಮತ್ತು  ಬಿಕ್ಲು ಶಿವ

   

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.

ADVERTISEMENT

ಈ ಹಿಂದೆ ಹೈಕೋರ್ಟ್ ಸಹ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿತ್ತು. ಅದರ ಬೆನ್ನಲ್ಲೇ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ಕು, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಬಸವರಾಜ್ ಪರ ಹಿರಿಯ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದ್ದು, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇದೊಂದು ಸಿವಿಲ್ ಮ್ಯಾಟರ್. ಅನಗತ್ಯವಾಗಿ ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಭೂ ಮಾಫಿಯ ರಾಜಕೀಯ ಶಕ್ತಿ ಮೇಲೆ ನಡೆಯುತ್ತಿದೆ ಅಲ್ಲವೇ ಎಂದು ಪ್ರಶ್ನಿಸಿದೆ.

ನಾನು ವಿರೋಧ ಪಕ್ಷದ ಶಾಸಕ, ನಮ್ಮ ಪಕ್ಷ ಅಧಿಕಾರದಲ್ಲಿಲ್ಲ ಎಂದು ಬಸವರಾಜ್ ಪರ ವಕೀಲರು ಉತ್ತರಿಸಿದ್ದಾರೆ. ಬಳಿಕ, ನಿಯಮಿತ ಜಾಮೀನು ಅರ್ಜಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಶಾಸಕರ ಬಂಧನಕ್ಕೆ ಸಿಐಡಿ ವಿಶೇಷ ತಂಡಗಳನ್ನು ರಚಿಸಿದೆ. ಆ ತಂಡಗಳು ಮಹಾರಾಷ್ಟ್ರಕ್ಕೆ ತೆರಳಿ, ಆರೋಪಿಗಾಗಿ ವಿವಿಧೆಡೆ ಹುಡುಕಾಟ ನಡೆಸುತ್ತಿವೆ.

‘ಬೈರತಿ ಬಸವರಾಜ ಅವರು ಮಹಾರಾಷ್ಟ್ರದ ಸ್ಟಾರ್‌ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿರುವ ಮಾಹಿತಿ ಸಿಕ್ಕಿದೆ. ವಿಶೇಷ ತಂಡಗಳು ಅಲ್ಲಿಗೆ ತೆರಳಿವೆ. ಅವರು ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ‘ಲುಕ್‍ಔಟ್ ನೋಟಿಸ್’ ಜಾರಿ ಮಾಡಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಕಳೆದ ಡಿಸೆಂಬರ್‌ನಲ್ಲೂ ಬೈರತಿ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೂ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಇದಾದ ಬೆನ್ನಲ್ಲೇ ಶಾಸಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲೂ ಶಾಸಕರು ತಲೆಮರೆಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.