ADVERTISEMENT

ADGP ಚಂದ್ರಶೇಖರ್‌ಗೆ ಬೆದರಿಕೆ: HDK ಜಾಮೀನು ರದ್ದಿಗೆ ಸುಪ್ರೀಂ ಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:51 IST
Last Updated 17 ಅಕ್ಟೋಬರ್ 2025, 6:51 IST
<div class="paragraphs"><p>ಸುಪ್ರೀಂ ಕೋರ್ಟ್ ಹಾಗೂ ಎಚ್‌.ಡಿ ಕುಮಾರಸ್ವಾಮಿ</p></div>

ಸುಪ್ರೀಂ ಕೋರ್ಟ್ ಹಾಗೂ ಎಚ್‌.ಡಿ ಕುಮಾರಸ್ವಾಮಿ

   

ನವದೆಹಲಿ: ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿರುವ ಆರೋಪ ಹೊತ್ತಿರುವ  ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧದ ತನಿಖೆಗೆ ತಡೆ ನೀಡಿರುವ ಹೈಕೋರ್ಟ್‌ನ ಮಧ್ಯಂತರ ಆದೇಶ ರದ್ದುಗೊಳಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. 

ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿ ಕೆ.ವಿನೋದ್‌ ಚಂದ್ರನ್‌ ಪೀಠವು, ‘ರಾಜಕೀಯ ಹೋರಾಟಗಳಿಗೆ ನ್ಯಾಯಪೀಠವನ್ನೇಕೆ ವೇದಿಕೆ ಮಾಡಿಕೊಳ್ಳುತ್ತೀರಿ’ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. 

ADVERTISEMENT

ಆಗ ರಾಜ್ಯ ಸರ್ಕಾರದ ಪರ ವಕೀಲರು, ‘ಅಕ್ರಮ ಗಣಿಗಾರಿಕೆಗೆ ಒಪ್ಪಿಗೆ ಕೊಟ್ಟ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ 2011ರಲ್ಲಿ ದೂರು ದಾಖಲಾಗಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ 2014ರಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದು ಆ ಪ್ರಕರಣಕ್ಕೆ ಸಂಬಂಧಿಸಿದ್ದು’ ಎಂದು ಹೇಳಲು ಮುಂದಾದರು. ಆಗ ಸಿಜೆಐ ಅವರು ‘ಅರ್ಜಿ ವಜಾಗೊಳಿಸಲಾಗಿದೆ’ ಎಂದು ಪ್ರಕಟಿಸಿದರು. 

ಪ್ರಕರಣವೇನು?:

ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಅವರು ಸಂಡೂರಿನ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅಕ್ರಮವಾಗಿ 550 ಎಕರೆ ಗಣಿ ಗುತ್ತಿಗೆ ನೀಡಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು ಎಂದು ಲೋಕಾಯುಕ್ತ ಪೊಲೀಸರು ರಾಜ್ಯಪಾಲರಲ್ಲಿ 2023ರಲ್ಲಿ ಅನುಮತಿ ಕೋರಿದ್ದರು. 2024ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಕುಮಾರಸ್ವಾಮಿ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ರದ್ದುಗೊಳಿಸಬೇಕು ಎಂದು ರಾಜ್ಯ ಸರ್ಕಾರವು ಅರ್ಜಿ ಸಲ್ಲಿಸಿತ್ತು. 

ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಎಡಿಜಿಪಿ ಚಂದ್ರಶೇಖರ್‌ ವಿರುದ್ಧ ಆರೋಪಗಳನ್ನು ಮಾಡಿದ್ದರು. ಚಂದ್ರಶೇಖರ್ ಅವರಿಗೆ ಬೆದರಿಕೆಯೊಡ್ಡಿದ ಆರೋಪದ ಅಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ವಿರುದ್ಧ ಸಂಜಯನಗರ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿತ್ತು.

‘ಎಸ್‌ಐಟಿ ಮುಖ್ಯಸ್ಥನಾಗಿ ನಾನು ಗಣಿಗಾರಿಕೆ ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದೇನೆ. ಕುಮಾರಸ್ವಾಮಿ ವಿರುದ್ಧ ದಾಖಲಾದ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದವು. ಅವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರಲ್ಲಿ ಅನುಮತಿ ಕೋರಿದ್ದೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ, ನನ್ನ ಬಗ್ಗೆ ಸುಳ್ಳು ಹಾಗೂ ದುರುದ್ದೇಶದ ಆರೋಪ ಮಾಡಿ ಬೆದರಿಕೆ ಒಡ್ಡಿದ್ದರು’ ಎಂದು ಚಂದ್ರಶೇಖರ್‌ ದೂರು ನೀಡಿದ್ದರು.

‘ನಿಖಿಲ್‌ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಹೇಳಿಕೆ ಕೊಟ್ಟಿದ್ದರು. ಸುರೇಶ್‌ ಬಾಬು ಅವರು ನನ್ನ ವಿರುದ್ದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು’ ಎಂದು ಉಲ್ಲೇಖಿಸಿದ್ದರು.

ಸಂಜಯನಗರ ಪೊಲೀಸರು ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್‌ 2025ರ ಮಾರ್ಚ್‌ 28ರಂದು ತಡೆ ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.