
ನವದೆಹಲಿ: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ಕಾಂಗ್ರೆಸ್‌ನ ಎಸ್.ಎನ್. ಸುಬ್ಬಾರೆಡ್ಡಿ ಅವರನ್ನು ಅನರ್ಹಗೊಳಿಸಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಬ್ಬಾರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಪ್ರತಿವಾದಿ ಸಿ.ಮುನಿರಾಜು ಅವರಿಗೆ ನೋಟಿಸ್ ಜಾರಿ ಮಾಡಿ ಮಧ್ಯಂತರ ಆದೇಶ ಹೊರಡಿಸಿತು. ಸುಬ್ಬಾ ರೆಡ್ಡಿ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ದೇವದತ್ ಕಾಮತ್ ವಾದ ಮಂಡಿಸಿದರು.
ಎಲ್ಲ ಪ‍್ರಾಯೋಗಿಕ ಉದ್ದೇಶಗಳಿಗೆ ಅರ್ಜಿದಾರರು ಶಾಸಕರಾಗಿ ಮುಂದುವರಿಯುತ್ತಾರೆ ಎಂದು ಪೀಠ ಘೋಷಿಸಿತು. ಪ್ರತಿ ಪ್ರಮಾಣಪತ್ರ ಸಲ್ಲಿಸುವಂತೆ ಮುನಿರಾಜು ಅವರಿಗೆ ಸೂಚಿಸಿದ ಪೀಠವು, ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು.
‘ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ನನ್ನನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕು’ ಎಂದು ಕೋರಿ ಸಿ.ಮುನಿರಾಜು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿ ಫೆಬ್ರುವರಿ 16ರಂದು ಆದೇಶ ಹೊರಡಿಸಿತ್ತು.
ಮೇಲ್ಮನವಿಯನ್ನು ಬಲವಾಗಿ ವಿರೋಧಿಸಿದ ಮುನಿರಾಜು ಪರ ವಕೀಲರು, ‘ಸುಬ್ಬಾ ರೆಡ್ಡಿ ತಮ್ಮ ಅಬಕಾರಿ ವ್ಯವಹಾರವನ್ನು ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ’ ಎಂದು ಆಕ್ಷೇಪಿಸಿದರು. ಆಗ ಸಿಜೆಐ, ‘ಅರ್ಜಿದಾರರು 19 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ನೀವು ಚುನಾವಣೆಯಲ್ಲಿ ಗೆಲ್ಲದಿದ್ದಾಗ, ಇಂತಹ ವಿಷಯಗಳನ್ನು ಅಗೆದು ತರುತ್ತೀರಿ‘ ಎಂದರು.
‘ಅವರು ತಮ್ಮ ಆತಿಥ್ಯ ವ್ಯವಹಾರವನ್ನು ಬಹಿರಂಗಪಡಿಸಿದ್ದಾರೆ. ಆದರೆ, ಮದ್ಯದ ವ್ಯವಹಾರ ಬಹಿರಂಗಪಡಿಸಲು ಹಿಂಜರಿದಿದ್ದಾರೆ’ ಎಂದು ಪ್ರತಿವಾದಿಯ ವಕೀಲರು ವಾದಿಸಿದರು. ‘ಆದಾಯವನ್ನು ಬಹಿರಂಗಪಡಿಸುವುದು ಅಗತ್ಯವಾಗಿರುತ್ತದೆಯೇ ಹೊರತು ವ್ಯವಹಾರದ ಸ್ವರೂಪವಲ್ಲ‘ ಎಂದು ನ್ಯಾಯಮೂರ್ತಿ ಬಾಗ್ಚಿ ಪ್ರತಿಕ್ರಿಯಿಸಿದರು. ‘ನ್ಯಾಯಾಲಯಗಳು ಲೆಕ್ಕ ಪರಿಶೋಧಕರ (ಸಿಎ) ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ’ ಎಂದು ಸಿಜೆಐ ಒತ್ತಿ ಹೇಳಿದರು.
‘ಹೂಡಿಕೆಯ ಸ್ವರೂಪ ಬಹಿರಂಗಪಡಿಸಬೇಕು‘ ಎಂದು ಪ್ರತಿವಾದಿಯ ವಕೀಲರು ವಾದ ಮಂಡಿಸಿದರು. ಆಗ ನ್ಯಾಯಮೂರ್ತಿ ಬಾಗ್ಚಿ, ‘ಹೂಡಿಕೆ ಬೇರೆ ಹಾಗೂ ವ್ಯವಹಾರ ಬೇರೆ’ ಎಂದು ಸ್ಪಷ್ಟಪಡಿಸಿದರು.
‘ಅರ್ಜಿದಾರರು 2018ರಿಂದ ಆಸ್ತಿ ತೆರಿಗೆ ಪಾವತಿಸಿರಲಿಲ್ಲ. 2023ರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕವೇ ₹1.09 ಕೋಟಿ ಬಾಕಿ ತೆರಿಗೆ ಪಾವತಿಸಿದ್ದಾರೆ’ ಎಂದು ಪ್ರತಿವಾದಿ ವಕೀಲರು ಗಮನ ಸೆಳೆದರು. ಈ ವಾದವನ್ನು ಪೀಠ ಮಾನ್ಯ ಮಾಡಲಿಲ್ಲ.
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಜಾಮೀನು ನಿರಾಕರಿಸಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ವಿನಯ ಕುಲಕರ್ಣಿ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಅಗಸ್ಟಿನ್ ಮಸೀಹ್ ಜಾರ್ಜ್ ಅವರ ಪೀಠವು ಈ ಆದೇಶ ಹೊರಡಿಸಿತು. ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ‘ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ಮುಗಿದಿದೆ. ಜತೆಗೆ, ಉಳಿದ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ. ಕುಲಕರ್ಣಿ ಅವರಿಗೂ ಜಾಮೀನು ನೀಡಬೇಕು’ ಎಂದು ಕೋರಿದರು.
ನ್ಯಾಯಮೂರ್ತಿ ಸಂಜಯ್ ಕರೋಲ್, ‘ಕುಲಕರ್ಣಿ ಅವರು ಕೊಲೆ ಪ್ರಕರಣದ ಕಿಂಗ್ ಪಿನ್ ಇರಬಹುದು. ಆದರೆ, ವಿಚಾರಣೆ ಬಹುತೇಕ ಮುಗಿದಿರುವುದರಿಂದ ಈಗ ಸಾಕ್ಷ್ಯ ನಾಶ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಡಿಮೆ. ಹೀಗಾಗಿ, ಜಾಮೀನು ನೀಡಲಾಗುತ್ತಿದೆ’ ಎಂದರು.
ಪ್ರಕರಣವೇನು?: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ವಿನಯ ಕುಲಕರ್ಣಿ ಅವರು 2025ರ ಜೂನ್ 13ರಿಂದ ನ್ಯಾಯಾಂಗ ಬಂಧನದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ 2025ರ ಡಿಸೆಂಬರ್ 8ರಂದು ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. 2026ರ ಜನವರಿ 27ರಂದು ಹೈಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.