ADVERTISEMENT

ರಾಜ್ಯದ 13,352 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸರಾಗ: ಸುಪ್ರೀಂ ಕೋರ್ಟ್‌ ಆದೇಶ

ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 13:30 IST
Last Updated 17 ಅಕ್ಟೋಬರ್ 2025, 13:30 IST
   

ನವದೆಹಲಿ: ಕರ್ನಾಟಕದಲ್ಲಿ 13,352 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. 

ದ್ವಿಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠವು, ‘ನೇಮಕಾತಿ ಪ್ರಕ್ರಿಯೆಯಿಂದ ಉಂಟಾಗುವ ಸೇವಾ ಸಂಬಂಧಿತ ದೂರುಗಳನ್ನು ಪರಿಹರಿಸಲು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ಸೂಕ್ತ ವೇದಿಕೆ’ ಎಂದು ಹೇಳಿದೆ. 

2023ರ ಅಕ್ಟೋಬರ್‌ 13ರಂದು ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿದ್ದ ಆಗಿನ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ದ್ವಿಸದಸ್ಯ ಪೀಠ, ‘ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಇಲ್ಲದ ಅಭ್ಯರ್ಥಿಗಳು ತಮ್ಮ ತಕರಾರನ್ನು ನ್ಯಾಯಮಂಡಳಿ ಮುಂದೆ ಮಂಡಿಸಿ ಸೂಕ್ತ ನ್ಯಾಯ ಪಡೆಯಬಹುದು’ ಎಂದು ಸೂಚಿಸಿತ್ತು.

ADVERTISEMENT

‘ಏಕ ಸದಸ್ಯ ಪೀಠ ನೀಡಿದ್ದ ತೀರ್ಪನ್ನು ಹೈಕೋರ್ಟ್‌ನ ವಿಭಾಗೀಯ ಪೀಠವು ಸರಿಯಾಗಿಯೇ ರದ್ದುಗೊಳಿಸಿದೆ. ಮೇಲ್ಮನವಿಗಳನ್ನು ಭಾಗಶಃ ಅನುಮತಿಸುವಲ್ಲಿ ಮತ್ತು ವಿಷಯವನ್ನು ನ್ಯಾಯಮಂಡಳಿಗೆ ವರ್ಗಾಯಿಸುವ ಸಂದರ್ಭದಲ್ಲಿ ಯಾವುದೇ ಲೋಪ ಎಸಗಿಲ್ಲ’ ಎಂದು ತೀರ್ಪನ್ನು ಬರೆದ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಹೇಳಿದರು. 

‘ಸೇವಾ ನ್ಯಾಯಮಂಡಳಿಗಳ ವ್ಯಾಪ್ತಿಗೆ ಬರುವ ವಿಷಯಗಳಲ್ಲಿ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್‌ಗಳು ರಿಟ್ ಅರ್ಜಿಗಳನ್ನು ಸ್ವೀಕರಿಸಬಾರದು’ ಎಂದು ನ್ಯಾಯಪೀಠ ಹೇಳಿದೆ.

ನ್ಯಾಯಮಂಡಳಿಯ ಅಂತಿಮ ತೀರ್ಪಿಗೆ ಅನುಗುಣವಾಗಿ 500 ಮೀಸಲು ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಪೀಠ ನಿರ್ದೇಶನ ನೀಡಿದೆ. 

ಪ್ರಕರಣವೇನು?

35 ಶೈಕ್ಷಣಿಕ ಜಿಲ್ಲೆಗಳಲ್ಲಿ 6ರಿಂದ 8ನೇ ತರಗತಿವರೆಗೆ 13352 ಶಿಕ್ಷಕರ ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಮಾರ್ಚ್‌ 21ರಂದು ಅಧಿಸೂಚನೆ ಹೊರಡಿಸಿತ್ತು.  2022ರ ಮೇ ತಿಂಗಳಲ್ಲಿ ನಡೆದ ಲಿಖಿತ ಪರೀಕ್ಷೆಯ ಬಳಿಕ ನವೆಂಬರ್‌ 18ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು.  ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸುವಾಗ ವಿವಾಹಿತ ಮಹಿಳೆಯ ಪತಿಯ ಆದಾಯ ಪ್ರಮಾಣಪತ್ರ ಪರಿಗಣಿಸಲಾಗಿತ್ತು. ‘ವಿವಾಹಿತ ಮಹಿಳೆಯರು ಪತಿಯ ಆದಾಯ ಪ್ರಮಾಣಪತ್ರವನ್ನೇ ಸಲ್ಲಿಸಬೇಕು ಎಂಬ ಬಗ್ಗೆ ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟ ನಿರ್ದೇಶನ ಇರಲಿಲ್ಲ. ಅರ್ಹತೆ ಇದ್ದರೂ ನಮ್ಮನ್ನು ನೇಮಕಾತಿ ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ಆರೋಪಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅವಕಾಶ ಪಡೆಯದವರು ಹೈಕೋರ್ಟ್‌ನ ಮೊರೆ ಹೋಗಿದ್ದರು. ‘ವಿವಾಹಿತ ಮಹಿಳೆಯ ತಂದೆಯ ಆದಾಯ ಪ್ರಮಾಣಪತ್ರವನ್ನೂ ಪರಿಗಣಿಸಬೇಕು’ ಎಂದು ಏಕಸದಸ್ಯ ಆದೇಶಿಸಿ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಗೊಳಿಸಿತ್ತು. ಕೋರ್ಟ್‌ ಆದೇಶದಂತೆ ಆಯ್ಕೆಪಟ್ಟಿಯನ್ನು ಸರ್ಕಾರ ಪರಿಷ್ಕರಿಸಿತ್ತು. ಮೊದಲಿದ್ದ ಪಟ್ಟಿಯಲ್ಲಿದ್ದ 451 ಅಭ್ಯರ್ಥಿಗಳನ್ನು ಹೊಸ ಪಟ್ಟಿಯಲ್ಲಿ ಕೈಬಿಡಲಾಗಿತ್ತು. ಪ್ರಕರಣ ಮತ್ತೆ ಕೋರ್ಟ್‌ ಮೆಟ್ಟಿಲೇರಿತ್ತು. ಏಕಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠ ರದ್ದುಗೊಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.