ADVERTISEMENT

ನೈಸ್‌ ಯೋಜನೆ ರದ್ದು: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 16:30 IST
Last Updated 19 ಫೆಬ್ರುವರಿ 2026, 16:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಬೆಂಗಳೂರು–ಮೈಸೂರು ಇನ್ಫಾಸ್ಟ್ರಕ್ಚರ್ ಕಾರಿಡಾರ್‌ (ಬಿಎಂಐಸಿ) ಯೋಜನೆಯನ್ನು ಮರು ಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. 

‘ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡ ನಮ್ಮ ಜಮೀನಿಗೆ ಪರಿಹಾರ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಮಾರಪ್ಪ ಗಾರ್ಡನ್‌ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಜನವರಿ 9ರಂದು ವಜಾಗೊಳಿಸಿದ್ದ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಈ ಕುರಿತು ಆದೇಶಿಸಿತ್ತು.

‘ಪ್ರಸ್ತಾವಿತ ಎಕ್ಸ್‌ಪ್ರೆಸ್‌–ವೇ ನಲ್ಲಿನ ಒಟ್ಟು 111 ಕಿ.ಮೀ ಗಳಲ್ಲಿ ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿ.ಮೀ ಮಾತ್ರ ನಿರ್ಮಿಸಲಾಗಿದೆ ಮತ್ತು 1995ರಲ್ಲಿ ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಯೋಜಿಸಲಾದ ಐದು ಪಟ್ಟಣಗಳಲ್ಲಿ ಈತನಕ ಯಾವುದೇ ಪ್ರಗತಿ ಕಂಡಿಲ್ಲ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿತ್ತು. 

ADVERTISEMENT

‘ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಮಾರ್ಗವನ್ನು ಭವಿಷ್ಯದಲ್ಲಿಯೂ ನಿರ್ಮಿಸುವ ಯಾವುದೇ ಸೂಚನೆ ಕಾಣಿಸುತ್ತಿಲ್ಲ. ಆದ್ದರಿಂದ, ಯೋಜನೆಯನ್ನು ಮರು ಪರಿಶೀಲಿಸಬೇಕು ಮತ್ತು ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತ್ತು.

ಯೋಜನೆ ಅನುಷ್ಠಾನಗೊಳಿಸುತ್ತಿರುವ ನೈಸ್ ಲಿಮಿಟೆಡ್ ಮತ್ತು ಇನ್ನೊಬ್ಬರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಮುಕುಲ್ ರೋಹಟಗಿ ಮತ್ತು ಎ.ಎನ್. ಎಸ್ ನಾಡಕರ್ಣಿ ಅವರ ವಾದ ಆಲಿಸಿದ ನಂತರ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು, ಹೈಕೋರ್ಟ್‌ ತೀರ್ಪಿನ 77 ಮತ್ತು 78ನೇ ಪ್ಯಾರಾಗ್ರಾಫ್‌ಗಳಿಗೆ ತಡೆ ನೀಡಿತು. 

ಖಾಸಗಿ ಭೂಮಾಲೀಕರು ಮತ್ತು ಇತರರಿಗೆ ಪೀಠವು ನೋಟಿಸ್‌ ಜಾರಿ ಮಾಡಿತು. ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿ ಪರಿಶೀಲಿಸಲು ಒಪ್ಪಿಕೊಂಡಿತು. ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 9ಕ್ಕೆ ಮುಂದೂಡಿತು. 

‘1995ರ ಯೋಜನಾ ತಾಂತ್ರಿಕ ವರದಿ (ಪಿಟಿಆರ್) ಗಮನಿಸಿದಾಗ, ಒಂದು ಸುಂದರ ಮತ್ತು ಭವಿಷ್ಯದ ಪರಿಕಲ್ಪನೆಯನ್ನು ನಾಗರಿಕರು ಮತ್ತು ಪರಿಸರದ ಹೆಸರಿನಲ್ಲಿ ಮಾಡಿದ ವೆಚ್ಚದಲ್ಲಿ ಕೊಲ್ಲಲಾಗಿದೆ. ಹಾಗಾಗಿ, ಹಳೆಯ ಯೋಜನೆಯನ್ನು ಕೈಬಿಟ್ಟು ಹೊಸ ಯೋಜನೆ ಆರಂಭಕ್ಕೆ ಕ್ರಮ ತೆಗೆದುಕೊಳ್ಳುವುದು ಸೂಕ್ತ’ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

‘ನಗರದ ಜನಸಂಖ್ಯೆಯನ್ನು 70 ಲಕ್ಷಕ್ಕೆ ಇಳಿಸಲು ಮತ್ತು ಬೆಂಗಳೂರು–ಮೈಸೂರು ನಡುವೆ ಐದು ಪಟ್ಟಣಗಳನ್ನು ರಚಿಸುವ ಮೂಲಕ ನಗರದ ದಟ್ಟಣೆಯನ್ನು ಕಡಿಮೆ ಮಾಡಲು 1995ರಲ್ಲಿ ಪಿಟಿಆರ್ ಸಿದ್ಧಪಡಿಸಲಾಗಿತ್ತು, 2011ರ ವೇಳೆಗೆ ನಗರದ ಜನಸಂಖ್ಯೆ 85 ಲಕ್ಷವನ್ನು ದಾಟುತ್ತದೆ ಎಂದೂ ನಿರೀಕ್ಷಿಸಲಾಗಿತ್ತು. ಆದರೆ, ಬಿಎಂಐಸಿ ಯೋಜನೆಯಡಿ ಕಳೆದ 30 ವರ್ಷಗಳಿಂದ ಕೇವಲ 47 ಕಿ.ಮೀ ಪೆರಿಫೆರಲ್ ರಸ್ತೆಗಳನ್ನು ನಿರ್ಮಿಸಲಾಗಿದೆ’ ಎಂದು ಹೇಳಿತ್ತು.

‘ಉತ್ತಮ ನಾಗರಿಕ ಸೌಲಭ್ಯಗಳ ಜೊತೆಗೆ ವ್ಯಾಪಾರ ಮತ್ತು ವೃತ್ತಿಪರರಿಗೆ ಉತ್ತಮ ಅವಕಾಶಗಳನ್ನು ಒದಗಿಸಿ ಮಹಾನಗರದ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಎಂಐಸಿ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಉದ್ದೇಶವು ಕನಸಾಗಿಯೇ ಉಳಿದಿದೆ. ಕಳೆದ 25 ವರ್ಷಗಳಲ್ಲಿ ಟೋಲ್ ಪ್ಲಾಜಾ ಮತ್ತು ಪೆರಿಫೆರಲ್‌ ರಸ್ತೆಗಳನ್ನು ಹೊರತುಪಡಿಸಿ ಕೇವಲ ಒಂದು ಕಿ.ಮೀ ಎಕ್ಸ್‌ಪ್ರೆಸ್ ಮಾರ್ಗವನ್ನು ನಿರ್ಮಿಸಲಾಗಿದೆ’ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.