ADVERTISEMENT

ರೈಲ್ವೆ ಮೇಲ್ಸೇತುವೆ ಉದ್ಘಾಟನೆ; ಸುರೇಶ ಅಂಗಡಿ– ಕೋರೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:40 IST
Last Updated 25 ಡಿಸೆಂಬರ್ 2018, 17:40 IST
ಬೆಳಗಾವಿಯ ಗೋಗಟೆ ವೃತ್ತದ ಬಳಿ ಮಂಗಳವಾರ ನಡೆದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಏರಲು ನಿರಾಕರಿಸಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹಾಗೂ ಅವರನ್ನು ಕರೆದೊಯ್ಯಲು ಬಂದ ಸಂಸದ ಸುರೇಶ ಅಂಗಡಿ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವ ಸತೀಶ ಜಾರಕಿಹೊಳಿ ಉಪಸ್ಥಿತರಿದ್ದರು
ಬೆಳಗಾವಿಯ ಗೋಗಟೆ ವೃತ್ತದ ಬಳಿ ಮಂಗಳವಾರ ನಡೆದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಏರಲು ನಿರಾಕರಿಸಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹಾಗೂ ಅವರನ್ನು ಕರೆದೊಯ್ಯಲು ಬಂದ ಸಂಸದ ಸುರೇಶ ಅಂಗಡಿ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವ ಸತೀಶ ಜಾರಕಿಹೊಳಿ ಉಪಸ್ಥಿತರಿದ್ದರು   

ಬೆಳಗಾವಿ: ಇಲ್ಲಿನ ಗೋಗಟೆ ವೃತ್ತದ ಬಳಿ ಮಂಗಳವಾರ ನಡೆದ ರೈಲ್ವೆ ಮೇಲ್ಸೇತುವೆಯ ಉದ್ಘಾಟನೆ ವೇಳೆ ಸಂಸದ ಸುರೇಶ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನಡುವೆ ಮಾತಿನ ಚಕಮಕಿ ನಡೆಯಿತು.

ತಮಗೆ ವೈಯಕ್ತಿಕವಾಗಿ ಆಮಂತ್ರಣ ನೀಡಿಲ್ಲ ಹಾಗೂ ವೇದಿಕೆಯ ಕುರ್ಚಿಯ ಮೇಲೆ ತಮ್ಮ ಹೆಸರು ಹಾಕಿಲ್ಲ ಎಂದು ಮುನಿಸಿಕೊಂಡ ಕೋರೆ ಅವರು, ವೇದಿಕೆ ಏರಲಿಲ್ಲ. ಈ ವೇಳೆ ಕೆಳಗಿಳಿದು ಬಂದ ಅಂಗಡಿ, 'ಎರಡು ತಿಂಗಳ ಹಿಂದೆಯೇ ಆಮಂತ್ರಣ ನೀಡಿದ್ದೇವೆ. ಸೀನಿಯರ್ ಆಗಿದ್ದೀರಿ ಹೀಗೇಕೆ ಮಾಡುತ್ತಿದ್ದೀರಿ. ನಿಮಗೆ ಕಾಮನಸೆನ್ಸ್ ಇಲ್ವಾ?' ಎಂದು ಹರಿಹಾಯ್ದರು.

'ಎಲ್ಲವನ್ನೂ ನೀನೇ ಜವಾಬ್ದಾರಿ ತೆಗೆದುಕೊಂಡು ಮಾಡುತ್ತಿದ್ದೀಯಾ, ನೀನು ಉದ್ಘಾಟನೆ ಮಾಡು. ನಾನು ರೈಲ್ವೆ ಅಧಿಕಾರಿಗಳ ಬಗ್ಗೆ ಹೇಳುತ್ತಿದ್ದೇನೆ. ನಾನೂ ಒಬ್ಬ ಸಂಸದನಿದ್ದೇನೆ. ನನ್ನ ಹೆಸರು ಹಾಕಿಲ್ಲವೆಂದರೆ ಹೇಗೆ? ಹೆಸರಿನ ಸಲುವಾಗಿ ಯಾವತ್ತೂ ಜಗಳವಾಡಿಲ್ಲ. ನೀನು ದಾದಾಗಿರಿ ಮಾಡಬೇಡ' ಎಂದು ಕೋರೆ ತಿರುಗೇಟು ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಮೂರು ಜನ ಸಂಸದರಿದ್ದೇವೆ. ಯಾರೊಬ್ಬರ ಹೆಸರು ಇಲ್ಲ. ವೇದಿಕೆಯ ಮೇಲೆ, ಪತ್ರಿಕೆಗಳ ಜಾಹೀರಾತಿನಲ್ಲಿಯೂ ನಮ್ಮ ಹೆಸರಿಲ್ಲ. ಎಲ್ಲದರಲ್ಲಿ ನಿಮ್ಮದೇ ಇದೆ. ನೀವೇ ಕಾರ್ಯಕ್ರಮ ಮಾಡಿಕೊಳ್ಳಿ. ನಾನು ಯಾವತ್ತೂ ಜಗಳ ಮಾಡಿರಲಿಲ್ಲ. ಇವತ್ತು ಮಾತನಾಡಿದ್ದೇನೆ’ ಎಂದರು.

ನಂತರ ಅಂಗಡಿ ಅವರು ಕೋರೆಯವರ ಕೈಹಿಡಿದು ಎಳೆದು, ವೇದಿಕೆಯತ್ತ ಕರೆದುಕೊಂಡು ಹೋದರು. ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಇತರ ಮುಖಂಡರು ಹಿಂಬಾಲಿಸಿದರು.

ಅನುದಾನದ ಬಗ್ಗೆ ಜಟಾಪಟಿ:

ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರೈಲ್ವೆ ಮೇಲ್ಸೇತುವೆ ನಿರ್ಮಾಣದಲ್ಲಿ ಕೇಂದ್ರಕ್ಕಿಂತ ಹೆಚ್ಚು ರಾಜ್ಯ ಸರ್ಕಾರದ ಪಾಲು ಇರುತ್ತದೆ. ಅಗತ್ಯ ಭೂಮಿಯನ್ನು ರಾಜ್ಯ ಸರ್ಕಾರ ನೀಡಿರುತ್ತದೆ ಎಂದು ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಸಂಸದ ಅಂಗಡಿ, ‘ರಾಜ್ಯ ಸರ್ಕಾರ ಈ ಕಾಮಗಾರಿಗೆ ಹೆಚ್ಚಿನ ಬೆಂಬಲ ನೀಡಲಿಲ್ಲ.‌ ಅದಕ್ಕೆ ಆಂತರಿಕ ಸಮಸ್ಯೆಗಳೇ ಹೆಚ್ಚಾಗಿದ್ದವು’ ಎಂದು ವ್ಯಂಗ್ಯವಾಡಿದರು.

ಕೋರೆ ಮಾತಿಗೆಆಕ್ಷೇಪ:

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ಈ ಮೇಲ್ಸೇತುವೆ ನಿರ್ಮಿಸಲು ಸಂಸದ ಸುರೇಶ ಅಂಗಡಿ ಬಹಳ ಶ್ರಮಪಟ್ಟಿದ್ದಾರೆ. ಸೇತುವೆಗೆ ಅವರ ಹೆಸರನ್ನೇ ಇಡಬೇಕು ಎಂದು ಹಾಸ್ಯಧಾಟಿಯಲ್ಲಿ ಹೇಳಿದರು. ಇದಕ್ಕೆ ವೇದಿಕೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಮೇಯರ ಬಸಪ್ಪ ಚಿಕ್ಕಲದಿನ್ನಿ, ಸೇತುವೆಗೆ ವಿಶ್ವಗುರು ಬಸವಣ್ಣನವರ ಹೆಸರಿಡುವ ಕುರಿತು ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ನಿರ್ಧರಿಸಲಾಗಿದೆ. ಠರಾವು ಕೂಡ ಪಾಸ್‌ ಮಾಡಲಾಗಿದೆಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.