ADVERTISEMENT

ಅನುದಾನರಹಿತ‌‌ ಕಾಲೇಜು ಸಿಬ್ಬಂದಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿ: ಸುರೇಶ್‌ ಕುಮಾರ್

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಶಿಕ್ಷಣ ಸಚಿವರ ಮನವಿ

​ಪ್ರಜಾವಾಣಿ ವಾರ್ತೆ
Published 20 ಮೇ 2021, 9:07 IST
Last Updated 20 ಮೇ 2021, 9:07 IST
ಎಸ್. ಸುರೇಶ್ ಕುಮಾರ್
ಎಸ್. ಸುರೇಶ್ ಕುಮಾರ್   

ಬೆಂಗಳೂರು: ‘ಕೋವಿಡ್ ಕಾರಣ‌ದಿಂದ ಸಂಕಷ್ಟಕ್ಕೆ ಸಿಲುಕಿರುವ, ಬಜೆಟ್ ಅನುದಾನರಹಿತ ಶಾಲೆ– ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಪ್ರಾಥಮಿಕ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಖಾಸಗಿ ಅನುದಾನರಹಿತ‌‌ ಶಾಲಾ ಕಾಲೇಜುಗಳಲ್ಲಿ ಅಂದಾಜು ಎರಡು‌ ಲಕ್ಷ ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಕೋವಿಡ್ ಕಾರಣದಿಂದ‌ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ ಶಿಕ್ಷಣ‌ ಕ್ಷೇತ್ರ ಕೂಡಾ ಪ್ರಧಾನವಾದುದು. ಸರ್ಕಾರ‌ ವಿಧಿಸಿದ ಲಾಕ್‌ಡೌನ್ ರಾಜ್ಯದಾದ್ಯಂತ ಇರುವ ಸಾವಿರಾರು ಖಾಸಗಿ ಅನುದಾನರಹಿತ ಶಿಕ್ಷಣ‌ ಸಂಸ್ಥೆಗಳ ಮೇಲೆ ಅವಲಂಬಿಸಿದ್ದ ಹಲವು ವರ್ಗಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ಸಾಲಿನಲ್ಲಿ ನೇರವಾಗಿ ತರಗತಿಗಳು‌ ನಡೆಯದ ಕಾರಣ, ಪೋಷಕರು ಮಕ್ಕಳ ಬೋಧನಾ ಶುಲ್ಕ ಪಾವತಿಸಲು ನಿರೀಕ್ಷಿತ ರೀತಿಯಲ್ಲಿ‌ ಆಸಕ್ತಿ ತೋರಲಿಲ್ಲ. ಇದೂ ಕೂಡಾ ಬಹುವಿಧದ ಸಾಮಾಜಿಕ‌‌ ಸಮಸ್ಯೆಗಳಿಗೆ ಕಾರಣವಾಯಿತು’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ADVERTISEMENT

‘ಆದರೆ, ಖಾಸಗಿ ಶಾಲೆಗಳಲ್ಲಿ‌, ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಬಜೆಟ್ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಧಕ, ಬೋಧಕೇತರ ಸಿಬ್ಬಂದಿ ಮುನ್ನೆಲೆಗೆ ಬಾರದ‌, ಅತಿಯಾದ ಸಮಸ್ಯೆಗೆ ಸಿಲುಕಿರುವ ಸಮುದಾಯವಾಗಿದ್ದಾರೆ. ವಿದ್ಯಾ ಸಂಸ್ಥೆಗಳ ಆಡಳಿತ ವರ್ಗಗಳು ನೀಡುವ ವೇತನ-ಭತ್ಯೆಗಳನ್ನು ಸಂತೃಪ್ತಿಯಿಂದ ಸ್ವೀಕರಿಸಿ ಮಕ್ಕಳ ಭವಿಷ್ಯವನ್ನು ಈ ಶಿಕ್ಷಕರು ಕಾಯುತ್ತಿದ್ದಾರೆ. ಪೋಷಕ-ಶಾಲೆಗಳ ನಡುವಿನ ಸಮಸ್ಯೆಗಳ ನೇರ ಪರಿಣಾಮ ಈ ಸಮುದಾಯದ ಮೇಲಾಗಿದೆ. ಅಸಂಖ್ಯ ಶಿಕ್ಷಕರು, ನರೇಗಾ ಯೋಜನೆಯಡಿ‌ ಕೂಲಿ‌ ಕೆಲಸ ಮಾಡಿದ್ದಾರೆ. ಹಣ್ಣು ತರಕಾರಿ ಮಾರಿದ್ದಾರೆ. ಈ ವರ್ಗದ ನೆರವಿಗೆ ಧಾವಿಸುವುದೂ ಸರ್ಕಾರದ ಜವಾಬ್ದಾರಿ’ ಎಂದೂ ಪತ್ರದಲ್ಲಿ ಹೇಳಿದ್ದಾರೆ.

‘ಶಿಕ್ಷಣದಂಥ ಪವಿತ್ರ ವೃತ್ತಿಯನ್ನು ಕೈಗೆತ್ತಿಕೊಂಡ‌‌ ಸಮುದಾಯಕ್ಕೆ‌ ನಾಗರಿಕ ಸಮಾಜದ ಪ್ರತಿಕ್ರಿಯೆ ತನ್ನದೇ‌ ಆದ ದೂರಗಾಮಿ‌, ನಕಾರಾತ್ಮಕವಾದ ಪರಿಣಾಮ ಬೀರಬಲ್ಲುದು. ಮುನ್ನೆಲೆಗೆ ಬಾರದ ಹಾಗೂ ತಮ್ಮ‌‌ ಆಯ್ಕೆಯ ಬೌದ್ಧಿಕ ಕ್ಷೇತ್ರ ಕಲ್ಪಿಸುವ ಸಾಮಾಜಿಕ ಸಂಕೋಚದ ಕಾರಣ, ಈ ವರ್ಗ ಗದ್ದಲದ ಹೋರಾಟಕ್ಕೂ ಮುಂದಾಗಿಲ್ಲ. ಆದರೆ, ಈ ಸಮುದಾಯ ತೀವ್ರ ಆರ್ಥಿಕ-ಭೌತಿಕ ಸಂಕಷ್ಟಗಳನ್ನು ಅನುಭವಿಸುತ್ತಿರುವುದು ಸತ್ಯ. ಹೀಗಾಗಿ, ಈ ವರ್ಗದ ಬಗ್ಗೆ ವಿಶೇಷ ಕಾಳಜಿ ತೋರಬೇಕಾದ ತುರ್ತು ಅವಶ್ಯಕತೆ ಇದೆ. ಈ ವರ್ಗಕ್ಕೆ ನೀಡುವ ಸಹಕಾರವು ಮಕ್ಕಳ ಭವಿಷ್ಯ ಕಾಯುವಂಥ ನಿರ್ಣಯವಾಗುತ್ತದೆ’ ಎಂದೂ ಪತ್ರದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.