ADVERTISEMENT

ಪಠ್ಯ ಮುಳುಗಿದರೂ ಭವಿಷ್ಯ ಮುಳುಗದು!

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 20:33 IST
Last Updated 12 ಅಕ್ಟೋಬರ್ 2019, 20:33 IST
ಎಸ್‌.ಸುರೇಶ್‌ ಕುಮಾರ್‌
ಎಸ್‌.ಸುರೇಶ್‌ ಕುಮಾರ್‌   

ಒಂದೂವರೆ ತಿಂಗಳಿನಿಂದ ನಾನು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಇದು ಎಷ್ಟು ಸವಾಲಿನದ್ದೋ ಅಷ್ಟೇ ತೃಪ್ತಿದಾಯಕ ವಿಷಯವೂ ಹೌದು. ಇಲಾಖೆಯ ಬಹುಮುಖಿ ಸವಾಲುಗಳು ನನ್ನ ಸಹನೆಯನ್ನು ಹೆಚ್ಚಿಸಿರುವುದು ನನ್ನ ಮಟ್ಟಿಗಂತೂ ಸಕಾರಾತ್ಮಕ ಅಂಶ.

ಶಿಕ್ಷಕರ ಕಷ್ಟಗಳಿಗೆ ಕಿವಿಯಾಗುವುದು, ವಿದ್ಯಾರ್ಥಿಗಳ ಅಬೋಧ ಮನಸ್ಸುಗಳನ್ನು ಅರ್ಥೈಸಿಕೊಳ್ಳುವ ಮೂಲಕ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ಕಲ್ಪಿಸುವ ಉದ್ದೇಶದ ಹಿನ್ನೆಲೆಯಲ್ಲಿಯೇ ನಾನು ಕಾರ್ಯೋನ್ಮುಖನಾಗಿದ್ದೇನೆ.

ಇಷ್ಟು ಅವಧಿಯಲ್ಲಿಯೇ ರಾಜ್ಯದ ಉದ್ದಗಲ ಪ್ರವಾಸ ಮಾಡಿ ಅಲ್ಲೆಲ್ಲಾ ಶಿಕ್ಷಕರೊಂದಿಗೆ ಮಾತನಾಡುವಷ್ಟೇ ಕಾಳಜಿಯಿಂದ ಆ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಮನಸ್ಸನ್ನು ಅರಿ ಯುವ ಪ್ರಯತ್ನ ಮಾಡಿದ್ದೇನೆ.

ADVERTISEMENT

ಇದರ ಫಲಶೃತಿಯಾಗಿ ವರ್ಗಾವಣಾ ನಿಯಂತ್ರಣಾ ಕಾಯ್ದೆಗೆ ಹಲವು ಬದಲಾವಣೆಗಳನ್ನು ತರುವ ಮೂಲಕ ಶಿಕ್ಷಕ ಸ್ನೇಹಿ ವರ್ಗಾವಣಾ ನೀತಿಗೆ ಮುಂದಾಗಿದ್ದೇನೆ. ಮುಂದಿನ ದಿನ ಗಳಲ್ಲಿ 50 ವರ್ಷ ಮೀರಿದ ರಾಜ್ಯದ ಯಾವುದೇ ಶಿಕ್ಷಕರು ಕಡ್ಡಾಯ ವರ್ಗಾವಣೆ ಶಿಕ್ಷೆಗೆ ಒಳಗಾಗುವ ಭೀತಿ ಇರದು. ಜೊತೆಜೊತೆಗೆ ಖಾಲಿ ಇರುವ ಪದವೀಧರ ಶಿಕ್ಷಕರ ನೇಮಕಾತಿಗೆ ವೇಗ ದೊರಕಿಸಿದ್ದೇನೆ. ಮುಂದಿನ ಶೈಕ್ಷಣಿಕ ಸಾಲಿನ ಆರಂಭದೊಳಗೆ ಮಕ್ಕಳಿಗೆ ಎಲ್ಲ ಪ್ರೋತ್ಸಾಹದಾಯಕ ಸವಲತ್ತುಗಳನ್ನು ವಿತರಿಸಲು ಅನುವಾಗುವಂತೆ ಈಗಾಗಲೇ ಪೂರ್ವಭಾವಿ ಕ್ರಮಗಳನ್ನು ಇಲಾಖೆಯು ತೆಗೆದುಕೊಳ್ಳುವ ನಿಟ್ಟಿನಲ್ಲಿ ಸೂಚನೆ ನೀಡಿದ್ದೇನೆ.

ಮಕ್ಕಳ ಕಲಿಕಾ ವಾತಾವರಣ ಸಹನೀಯಗೊಳ್ಳಬೇಕು. ಅನುಭವದ ಜೊತೆ ಅನುಭಾವವೂ ಮುಖ್ಯವಾಗಬೇಕು ಎಂಬ ಆಶಯದೊಂದಿಗೆ ತಿಂಗಳಿ ಗೊಂದು ದಿನ ಬ್ಯಾಗ್ ರಹಿತ ದಿನದ ಆಚರಣೆಗೆ ಚಾಲನೆ ನೀಡಿದ್ದೇನೆ. ನಿರಂತರ ಮೌಲ್ಯಮಾಪನದ ನೆಪದಲ್ಲಿ ಕಲಿಕಾ ಮಟ್ಟ ಕುಸಿಯುತ್ತಿರುವ ವಿಷಯವನ್ನೂ ಸಹ ನಾವು ಗಂಭೀರ ವಾಗಿ ತೆಗೆದುಕೊಳ್ಳಬೇಕಿದೆ.

ಇತ್ತೀಚಿಗೆ ‘ಪ್ರಜಾವಾಣಿ’-ಕನ್ನಡ ದಿನಪತ್ರಿಕೆಯ ಅಗ್ರಲೇಖನದಲ್ಲಿ ಈ ಕುರಿತಂತೆ ಅತ್ಯಂತ ವಿಶ್ಲೇಷಣಾತ್ಮಕವಾಗಿ ವಿವರಿಸಲಾಗಿದ್ದು, ಈ ಕುರಿತಂತೆ ನನ್ನ ಮುಕ್ತ ಪ್ರತಿಪಾದನೆಯನ್ನು ಸಹ ನಾನು ಸ್ಪಷ್ಟಪಡಿಸಿದ್ದೇನೆ. ಕಲಿಕೆಯ ಗಂಭೀರತೆಯನ್ನು ಸಹ ವಿದ್ಯಾರ್ಥಿಗಳು ಅರಿತುಕೊಳ್ಳಬೇಕೆಂಬ ಹಾಗೂ ಪ್ರತಿ ವಿದ್ಯಾರ್ಥಿಯೂ ಸಮಾಜದ ಆಗುಹೋಗುಗಳೊಂದಿಗೆ ಕ್ರಿಯಾತ್ಮಕವಾಗಿ ಸ್ಪಂದಿಸುವ ವ್ಯಕ್ತಿಯಾಗಬೇಕೆಂಬ ಸ್ವಾರ್ಥರಹಿತವಾದ ನಿಲುವು ನನ್ನದು. ಹಾಗಾಗಿ ಈ ಬಾರಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಪ್ರಾಯೋಗಿಕವಾಗಿ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಒಳ್ಳೆಯ ಕಲಿಕಾ ವಾತಾವರಣ ಸೃಷ್ಟಿಯಾಗಬೇಕಾದರೆ ಗುಣಮಟ್ಟದ ವ್ಯವಸ್ಥೆ ನಿರ್ಮಾಣ ಮಾಡಬೇಕು. ಮಕ್ಕಳಿಗೆ ಎಲ್ಲ ಪ್ರೋತ್ಸಾಹದಾಯಕ ಸವಲತ್ತುಗಳು ನಿಗದಿತ ಅವಧಿಯಲ್ಲಿ ದೊರೆಯಬೇಕೆಂಬುದು ನನ್ನ ನಿಲುವು.

ನಾನು ಸಚಿವನಾಗಿ ಪದಗ್ರಹಣ ಮಾಡಿದ ಸಂದರ್ಭದಲ್ಲಿ ರಾಜ್ಯದ ಉತ್ತರ ಭಾಗದಲ್ಲಿ ಪ್ರಕೃತಿ ವಿಕೋಪ ಆ ಪ್ರದೇಶವನ್ನು ಜರ್ಝರಿತಗೊಳಿಸಿತ್ತು. ಅಲ್ಲಿ ಶಾಲಾ ಕಟ್ಟಡಗಳು, ಆಸ್ಪತ್ರೆಗಳಿಂದ ಹಿಡಿದು ಜನರು ತಮ್ಮ ನೆಲೆಯಾದ ಸೂರುಗಳನ್ನೇ ಕಳೆದುಕೊಂಡು ಬೀದಿಗೆ ಬಿದ್ದ ಸ್ಥಿತಿಯಲ್ಲಿದ್ದಾರೆ. ನಾನು ಸಚಿವನಾದ ಮರುದಿನವೇ ಕೊಡಗಿಗೆ ಭೇಟಿ ನೀಡಿದೆ. ರಾಯಚೂರು, ಬೆಳಗಾವಿ, ಚಿಕ್ಕೋಡಿ, ದಕ್ಷಿಣ ಕನ್ನಡ-ಉಡುಪಿ ಭಾಗಗಳಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ.

ವಸ್ತುಸ್ಥಿತಿಯನ್ನು ಅರಿತಿದ್ದೇನೆ. ನೆರೆ-ಪ್ರಕೃತಿ ವಿಕೋಪ ನಿಧಿಯಲ್ಲಿ ಸರ್ಕಾರ ಬಿಡುಗಡೆ ಮಾಡಿದ ₹ 500 ಕೋಟಿ ಗಳಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಹಂಚಿಕೆಯಾದ ಹಣದಲ್ಲಿ ಸರ್ಕಾರಿ ಶಾಲೆಗಳ ದುರಸ್ತಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದ್ದೇನೆ.

ಅಲ್ಲದೇ ಆಯಾ ಜಿಲ್ಲಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕರುಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ ಸೂಕ್ತ ಸೂಚನೆ ನೀಡಿದ್ದೇನೆ. ನೆರೆಪೀಡಿತ 15 ಜಿಲ್ಲೆಗಳಿಗೆ ಸಂಬಂಧಿ ಸಿದಂತೆ 11 ಲಕ್ಷ ಪಠ್ಯಪುಸ್ತಕಗಳು ಹಾಳಾಗಿರುವುದನ್ನು ನಮ್ಮ ಇಲಾಖೆ ಅಂದಾಜಿಸಿದೆ. ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳೆಂಬ ಭೇದವಿಲ್ಲದೇ ಆ ಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಇನ್ನೊಂದು ಸೆಟ್ ಪಠ್ಯಪುಸ್ತಕ ಗಳನ್ನು ಮುದ್ರಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ನೆರೆಪೀಡಿತ 15 ಜಿಲ್ಲೆಗಳ ಪೈಕಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಅವಶ್ಯ ವಿರುವ 5.71 ಲಕ್ಷ ಹೊರತು ಪಡಿಸಿ ಸುಮಾರು 4.61 ಲಕ್ಷ ಪಠ್ಯಪುಸ್ತ ಕಗಳನ್ನು ಈಗಾಗಲೇ ಸರಬರಾಜು ಮಾಡ ಲಾಗಿದೆ. ದಸರಾ ರಜೆ ಮುಗಿದು ಶಾಲೆ ಪ್ರಾರಂಭವಾಗುವ ವೇಳೆಗೆ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಯಾರಿಗೂ ಈ ಬಗ್ಗೆ ಅನುಮಾನ ಬೇಡ.

(ಲೇಖಕ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.