ADVERTISEMENT

ಜಾತಿ ಪದ್ಧತಿ ಬೇಡವಾದರೆ ಜಾತಿ ಪ್ರಮಾಣ ಪತ್ರ ಏಕೆ: ಪ್ರಶ್ನೆಗೆ ಸಚಿವ ತಬ್ಬಿಬ್ಬು

ಸಂವಾದದಲ್ಲಿ ಶಿಕ್ಷಣ ಸಚಿವರನ್ನೇ ಪೇಚಿಗೆ ಸಿಕ್ಕಿಸಿದ ಬಾಲಕಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 15:31 IST
Last Updated 28 ಸೆಪ್ಟೆಂಬರ್ 2019, 15:31 IST
   

ಕಲಬುರ್ಗಿ: ‘ಜಾತಿ ವ್ಯವಸ್ಥೆ ಸರಿಯಲ್ಲ, ಅದರ ನಿರ್ಮೂಲನೆ ಮಾಡಬೇಕು ಎಂದು ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುತ್ತಾರೆ. ಆದರೆ, ಮಾರನೇ ದಿನವೇ ಜಾತಿ ಪ್ರಮಾಣ ಪತ್ರ ತರುವಂತೆ ಹೇಳುತ್ತಾರೆ. ನಾವು ಏನನ್ನು ನಂಬಬೇಕು..?’

ನಗರದ ರೋಟರಿ ಕ್ಲಬ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಾಕ್ಷಿ ಅವರು ಈ ಪ್ರಶ್ನೆ ಕೇಳುವ ಮೂಲಕ ಸಚಿವರನ್ನು ಪೇಚಿಗೆ ಸಿಕ್ಕಿಸಿದರು.

ಮಕ್ಕಳಿಗೆ ಕೆಲವು ನೀತಿ ಪಾಠ ಬೋಧಿಸಿದ ಸುರೇಶಕುಮಾರ್‌ ಅವರು, ಸಂವಾದದಲ್ಲಿ ಪ್ರಶ್ನೆ ಕೇಳಲು ಹೇಳಿದರು. ಆಗ ಎದ್ದುನಿಂತ ವಿದ್ಯಾರ್ಥಿನಿ ಸಚಿವರತ್ತ ಈ ಪ್ರಶ್ನೆ ತೂರಿದರು.

ಇದಕ್ಕೆ ಚುಟುಕಾಗಿ ಉತ್ತರಿಸಿದ ಸಚಿವ, ‘ದೊಡ್ಡವರಿಗೂ ಇದೂವರೆಗೆ ಹೊಳೆಯದಂಥ ವಿಚಾರವನ್ನು ಕೇಳಿದ್ದೀರಿ. ವೆರಿ ಗುಡ್‌. ಇದಕ್ಕೆ ನಾನೂ ಉತ್ತರಿಸಲು ಅಸಾಧ್ಯವೆನಿಸುತ್ತದೆ. ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಾದ ಸಂಗತಿ’ ಎನ್ನುತ್ತ ವಿದ್ಯಾರ್ಥಿನಿಯ ಬೆನ್ನುತಟ್ಟಿದರು.

ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣ ಸುಧಾರಣೆ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಮಕ್ಕಳು ಕೇಳಿದರು. ಎಲ್ಲರಿಗೂ ಸಮಾಧಾನದಿಂದಲೇ ಉತ್ತರಿಸಿದ ಸಚಿವ, ‘ಈ ಕಾರ್ಯಕ್ರಮ ಮಕ್ಕಳಿಗೆ ಮಾತ್ರ ಸೀಮಿತ. ಇಲ್ಲಿ ಹಾರ– ತುರಾಯಿ– ಸನ್ಮಾನ ಏನೂ ಬೇಡ’ ಎಂದು ಸರಳತೆ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.