ADVERTISEMENT

ಸಿಗದ ಬಿಜೆಪಿ ನೆರವು: ಅನರ್ಹ ಶಾಸಕರ ಅಸಮಾಧಾನ, ರಾಜಕೀಯ ನಡೆಗಳ ಬಗ್ಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 2:07 IST
Last Updated 14 ಸೆಪ್ಟೆಂಬರ್ 2019, 2:07 IST
   

ಬೆಂಗಳೂರು: ರಾಜೀನಾಮೆ ಕೊಡುವ ಮುನ್ನ ನೀಡಿದ ಭರವಸೆಯನ್ನು ಬಿಜೆಪಿ ನಾಯಕರು ಈಡೇರಿಸುತ್ತಿಲ್ಲ ಎಂದು ಅನರ್ಹಗೊಂಡಿರುವ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಡಾ.ಕೆ.ಸುಧಾಕರ್ ನಿವಾಸದಲ್ಲಿ ಶುಕ್ರವಾರ ಸಭೆ ಸೇರಿದ್ದ ಅವರು ಮುಂದಿನ ರಾಜಕೀಯ ನಡೆಗಳ ಬಗ್ಗೆ ಚರ್ಚಿಸಿದ್ದಾರೆ.

ಕೋರ್ಟ್‌ನಲ್ಲಿ ಗುರುವಾರ(ಸೆ.12) ವಿಚಾರಣೆ ಆರಂಭವಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದೆ. ಈಗ ಶಾಸಕ ಸ್ಥಾನವೂ ಉಳಿದಿಲ್ಲ, ಅಧಿಕಾರವೂ ಸಿಗಲಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜಕೀಯ ಭವಿಷ್ಯವೇ ಮಸುಕಾಗಲಿದೆ ಎಂಬ ಚರ್ಚೆ ಸಭೆಯಲ್ಲಿ ನಡೆಯಿತು ಎಂದು ಗೊತ್ತಾಗಿದೆ.

ADVERTISEMENT

‘ತ್ವರಿತ ವಿಚಾರಣೆ ನಡೆಸಲು ಸಹಕಾರ ನೀಡುವುದಾಗಿ ಸರ್ಕಾರ ರಚನೆ ಸಮಯದಲ್ಲಿ ಬಿಜೆಪಿಯ ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಈಗ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ವಿಚಾರಣೆ ವಿಳಂಬವಾದಲ್ಲಿ ಉಪ ಚುನಾವಣೆ ನಡೆದರೆ ತಮ್ಮ ಸ್ಥಿತಿ ಅತಂತ್ರವಾಗಲಿದೆ. ಹಾಗಾಗಿ ಬಿಜೆಪಿ ನಾಯಕರ ನೆರವು ನಂಬಿಕೊಳ್ಳುವುದಕ್ಕಿಂತ ತ್ವರಿತ ವಿಚಾರಣೆ ಆರಂಭಿಸುವಂತೆ ಕೋರ್ಟ್‌ನಲ್ಲಿ ಮನವಿ ಮಾಡಿಕೊಳ್ಳಲು ವಕೀಲರನ್ನು ಕೋರಲು ಸಭೆ ನಿರ್ಧರಿಸಿತು’ ಎಂದು ಮೂಲಗಳು ಹೇಳಿವೆ.

‘ಶಾಸಕ ಸ್ಥಾನ ಕಳೆದುಕೊಂಡು ಒಂದೂವರೆ ತಿಂಗಳು ಕಳೆದಿದ್ದರೂ ನಮ್ಮ ನೋವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳೂ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಕೆಲವರ ಕೆಲಸಗಳು ಮಾತ್ರ ಆಗುತ್ತಿದ್ದು, ಉಳಿದವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಕೆಲವರು ಆರೋಪಿಸಿದರು ಎನ್ನಲಾಗಿದೆ.

‘ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ವಿಚಾರಣೆಗೆ ವಕೀಲರ ಮೂಲಕ ಒತ್ತಡ ಹಾಕುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೇರೆ ವಿಚಾರಗಳು ಚರ್ಚೆಯಾಗಿಲ್ಲ’ ಎಂದು ಬಿ.ಸಿ. ಪಾಟೀಲ ಹೇಳಿದರು.

ಸಭೆಯಲ್ಲಿ ಹಾಜರಿದ್ದವರು: ಎಂ.ಟಿ.ಬಿ.ನಾಗರಾಜ್, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ, ರೋಷನ್ ಬೇಗ್, ಮುನಿರತ್ನ, ಪ್ರತಾಪಗೌಡ ಪಾಟೀಲ, ಶ್ರೀಮಂತ ಪಾಟೀಲ, ಬೈರತಿ ಬಸವರಾಜ

‘ಹೃದಯದಿಂದ ಕಿತ್ತು ಹಾಕಿದ್ದೇನೆ’

‘ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ ಎಂದು ಹೇಳಿದ್ದು ನಿಜ. ಈಗ ನನ್ನ ಹೃದಯದಿಂದ ಅವರನ್ನು ಕಿತ್ತು ಹಾಕಿದ್ದೇನೆ’ ಎಂದುಎಂ.ಟಿ.ಬಿ.ನಾಗರಾಜ್ ಅವರು ಮತ್ತೊಮ್ಮೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಅಂದಿನ ವಿಧಾನ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

‘ನನ್ನ ಸೋಲಿಗೆ ರಮೇಶ್ ಕುಮಾರ್ ಕಾರಣ ಎಂದು ಲೋಕಸಭೆಗೆ ಸ್ಪರ್ಧಿಸಿ ಸೋತಿರುವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುವ ಮೊದಲು ಅವರನ್ನು ಕಾಂಗ್ರೆಸ್‌ನಿಂದ ಹೊರಕ್ಕೆ ಹಾಕಬೇಕಿತ್ತು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.