ADVERTISEMENT

BJPಯ 18 ಶಾಸಕರ ಅಮಾನತು ರದ್ದು: ಸಂಯಮದಿಂದ ನಡೆದುಕೊಳ್ಳುವುದಾಗಿ ತಿಳಿಸಿದ್ದಾರಂತೆ!

​ಪ್ರಜಾವಾಣಿ ವಾರ್ತೆ
Published 25 ಮೇ 2025, 15:50 IST
Last Updated 25 ಮೇ 2025, 15:50 IST
ಯು.ಟಿ. ಖಾದರ್ 
ಯು.ಟಿ. ಖಾದರ್    

ಬೆಂಗಳೂರು: ಬಜೆಟ್‌ ಅಧಿವೇಶನದ ಕೊನೆ ದಿನ (ಮಾರ್ಚ್‌ 21) ಕಲಾಪಗಳಿಗೆ ಅಡ್ಡಿಪಡಿಸಿದ ಕಾರಣಕ್ಕೆ ಬಿಜೆಪಿಯ 18 ಶಾಸಕರನ್ನು ಆರು ತಿಂಗಳು ಅಮಾನತು ಮಾಡಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ನೀಡಿದ್ದ ರೂಲಿಂಗ್‌ ಅನ್ನು ಭಾನುವಾರ ಹಿಂಪಡೆಯಲಾಗಿದೆ.

ಅಮಾನತು ವಾಪಸಿಗೆ ಆಗ್ರಹಿಸಿ ಖಾದರ್ ಅವರಿಗೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮತ್ತು ಅಮಾನತುಗೊಂಡಿದ್ದ ಬಿಜೆಪಿ ಶಾಸಕರು ಮನವಿ ಸಲ್ಲಿಸಿದ್ದರು.

ಈ ಕುರಿತು ಚರ್ಚಿಸಲು ಸ್ಪೀಕರ್ ಅವರು ವಿಧಾನಸೌಧದಲ್ಲಿ ಭಾನುವಾರ ಕರೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಆರ್.ಅಶೋಕ ಭಾಗವಹಿಸಿದ್ದರು. ಈ ಸಭೆಯಲ್ಲಿ ಸ್ಪೀಕರ್ ನಿರ್ಣಯ ಪ್ರಕಟಿಸಿದರು.

ADVERTISEMENT

‘ಶಾಸಕರ ಅಮಾನತು ಅವಧಿಯಲ್ಲಿ ಎರಡು ತಿಂಗಳು ಕಳೆದಿದೆ. ಅಮಾನತುಗೊಂಡಿರುವ ಶಾಸಕರು ಈ ಅವಧಿಯಲ್ಲಿ ತಮ್ಮ ನಡೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದೆ ಸಂವಿಧಾನಾತ್ಮಕವಾಗಿ ಸದನದ ಕಲಾಪಗಳಲ್ಲಿ ಸಂಯಮದಿಂದ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಇದಕ್ಕೆ ಸಹಮತ ಸೂಚಿಸಿದರು.  ಅಮಾನತು ನಿರ್ಣಯ ಹಿಂತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಮುಂದಿನ ಅಧಿವೇಶನದಲ್ಲಿ ಸದನದ ಘಟನೋತ್ತರ ಅನುಮೋದನೆ ಪಡೆಯಲೂ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಅಮಾನತುಗೊಂಡಿದ್ದ ಶಾಸಕರು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸಲು ಮತ್ತು ವಿಧಾನ ಮಂಡಲ/ವಿಧಾನಸಭೆಯ ಸ್ಥಾಯಿ ಸಮಿತಿಗಳ ಸಭೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ. ವಿಧಾನಸಭೆ ಕಾರ್ಯಕಲಾಪಗಳ ಪಟ್ಟಿಯಲ್ಲಿ ಈ ಶಾಸಕರ ಹೆಸರಿನಲ್ಲಿ ಯಾವುದೇ ವಿಷಯ ನಮೂದು ಮಾಡಬಾರದು. ಶಾಸಕರು ಅಮಾನತು ಅವಧಿಯಲ್ಲಿ ನೀಡುವ ಯಾವುದೇ ಸೂಚನೆ ಪರಿಗಣಿಸುವುದಿಲ್ಲ. ಸಮಿತಿಗಳ ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ. ದಿನಭತ್ಯೆ ಪಡೆಯಲೂ ಅರ್ಹರಿರುವುದಿಲ್ಲ ಎಂಬ ನಿರ್ಬಂಧಗಳು ತಕ್ಷಣದಿಂದ ರದ್ದುಗೊಳ್ಳಲಿದೆ’ ಎಂದೂ ಅವರು ತಿಳಿಸಿದ್ದಾರೆ.

ಅಮಾನತಿಗೆ ಕಾರಣವೇನಾಗಿತ್ತು?

ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರನ್ನು ‘ಮಧುಬಲೆ’ಗೆ (ಹನಿ ಟ್ರ್ಯಾಪ್‌) ಸಿಲುಕಿಸಲು ಯತ್ನಿಸಲಾಗಿದೆ ಎಂಬ ಆರೋಪದ ಕುರಿತು ತನಿಖೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಗದ್ದಲ ನಡೆಸಿ, ಸಭಾಧ್ಯಕ್ಷರ ಪೀಠದವರೆಗೂ ನುಗ್ಗಿ ಹೋಗಿ, ಅವರ ಮುಖದ ಮೇಲೆ ಕಾಗದದ ಚೂರುಗಳನ್ನು ಎಸೆದ ಕಾರಣಕ್ಕೆ 18 ಶಾಸಕರನ್ನು ಅಮಾನತು ಮಾಡಲಾಗಿತ್ತು.

ಬಜೆಟ್‌ ಅಧಿವೇಶನದ ಕೊನೆಯ ದಿನ ನಡೆದ ಗದ್ದಲದ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು, ‘18 ಶಾಸಕರು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ’ ಎಂದು ಪ್ರಕಟಿಸಿದ್ದರು. ಅಲ್ಲದೆ, ಸಭಾಧ್ಯಕ್ಷರು ಹೆಸರಿಸಿರುವ ಶಾಸಕರನ್ನು ಆರು ತಿಂಗಳು ಸದನದಿಂದ ಅಮಾನತುಗೊಳಿಸುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ನಿರ್ಣಯ ಮಂಡಿಸಿದ್ದರು. ಅದನ್ನು ಧ್ವನಿಮತಕ್ಕೆ ಹಾಕಿದ್ದ ಸಭಾಧ್ಯಕ್ಷರು,  ನಿರ್ಣಯ ಅಂಗೀಕಾರವಾಗುತ್ತಿದ್ದಂತೆಯೇ ‘18 ಶಾಸಕರನ್ನು ಆರು ತಿಂಗಳಿಗೆ ಸದನದಿಂದ ಅಮಾನತು ಮಾಡಲಾಗಿದೆ’ ಎಂದು  ರೂಲಿಂಗ್ ನೀಡಿದ್ದರು.

ಶಾಸಕರ ಅಮಾನತು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. ಅಮಾನತು ವಾಪಸಿಗೆ ವಿಧಾನಸಭಾಧ್ಯಕ್ಷರಿಗೆ ಸೂಚನೆ ನೀಡಬೇಕು ಮತ್ತು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಆರ್‌.ಅಶೋಕ ನೇತೃತ್ವದ ಶಾಸಕರ ನಿಯೋಗ ಮನವಿ ಸಲ್ಲಿಸಿತ್ತು.

ಮನವಿಗೆ ಸ್ಪಂದಿಸಿದ್ದ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಕಾನೂನು ಸಚಿವರಿಗೆ ಪತ್ರ ಬರೆದು, ‘ಶಾಸಕರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, 18 ಶಾಸಕರ ಅಮಾನತು ಹಿಂಪಡೆಯಬೇಕು. ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಅನುಗುಣವಾಗಿ ಜನಪ್ರತಿನಿಧಿಗಳಾದ ಶಾಸಕರು ಪ್ರತಿದಿನ ಸಾರ್ವಜನಿಕರ ಕೆಲಸಗಳನ್ನು ಮಾಡಬೇಕಾಗಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಸೂಚನೆ ನೀಡಿದ್ದರು.

ಅಮಾನತುಗೊಂಡಿದ್ದ ಶಾಸಕರು

ದೊಡ್ಡನಗೌಡ ಪಾಟೀಲ (ವಿರೋಧ ಪಕ್ಷದ ಮುಖ್ಯ ಸಚೇತಕರು)

ಡಾ.ಸಿ.ಎನ್‌. ಅಶ್ವತ್ಥ ನಾರಾಯಣ

ಎಸ್.ಆರ್. ವಿಶ್ವನಾಥ್

ಬೈರತಿ ಬಸವರಾಜು

ಎಸ್.ಎನ್. ಚನ್ನಬಸಪ್ಪ

ಉಮಾನಾಥ ಕೋಟ್ಯಾನ್

ಬಿ. ಸುರೇಶ್ ಗೌಡ

ಡಾ. ಶೈಲೇಂದ್ರ ಬೆಲ್ದಾಳೆ

ಶರಣು ಸಲಗರ

ಸಿ.ಕೆ.ರಾಮಮೂರ್ತಿ

ಯಶ್‌ ಪಾಲ್ ಸುವರ್ಣ

ಹರೀಶ್ ಬಿ. ಪಿ

ಡಾ.ಭರತ್ ಶೆಟ್ಟಿ

ಬಸವರಾಜ ಮತ್ತಿಮಡು

ಧೀರಜ್ ಮುನಿರಾಜು

ಮುನಿರತ್ನ

ಡಾ.ಚಂದ್ರು ಲಮಾಣಿ

ಶಾಸಕರನ್ನು ಅಮಾನತು ಮಾಡಿ ಷರತ್ತು ವಿಧಿಸಿರುವುದನ್ನು ರದ್ದು ಮಾಡಿದ್ದೇನೆ. ಅಮಾನತುಗೊಂಡವರಿಗೆ ಪರಿಸ್ಥಿತಿ ಗೊತ್ತಾಗಿದೆ. ಮುಂದೆ ಅವರು ಈ ರೀತಿಯ ವರ್ತನೆ ತೋರಿಸುವುದಿಲ್ಲ ಎಂಬ ನಂಬಿಕೆಯಿದೆ.
–ಯು.ಟಿ. ಖಾದರ್ ವಿಧಾನಸಭಾಧ್ಯಕ್ಷ
ವಿಧಾನಸಭೆಗೆ ಆಡಳಿತ ಪಕ್ಷ ಮಾತ್ರವಲ್ಲ ವಿಪಕ್ಷವೂ ಪ್ರಮುಖ. ನಮ್ಮ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ಅಮಾನತು ಹಿಂಪಡೆಯಬೇಕೆಂಬ ಮನವಿಗೆ ಮುಖ್ಯಮಂತ್ರಿ ಸಭಾಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ
–ಆರ್. ಅಶೋಕ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.