
ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಪಿಡಿಒ ಕೆ.ಪಿ.ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೆಎಸ್‌ಎಟಿ (ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ) ತಡೆ ನೀಡಿದೆ.
ಈ ಸಂಬಂಧ ಪ್ರವೀಣ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕೆಎಸ್‌ಎಟಿ ನ್ಯಾಯಾಂಗ ಸದಸ್ಯ ಎಸ್.ವೈ.ವಟವಟಿ ಅವರಿದ್ದ ಪೀಠವು ಗುರುವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರ ವಾದ ಮನ್ನಿಸಿದ ಪೀಠವು, ಸರ್ಕಾರ ಹೊರಡಿಸಿರುವ ಅಮಾನತು ಆದೇಶ ಜಾರಿಗೆ ಮಧ್ಯಂತರ ತಡೆ ನೀಡಿತು. ಅಂತೆಯೇ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಅಮಾನತು: ಪ್ರವೀಣ್ ಕುಮಾರ್, ಅಕ್ಟೋಬರ್ 12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಗಣವೇಷಧಾರಿಯಾಗಿ ಕೈಯಲ್ಲಿ ದಂಡ ಹಿಡಿದು ಭಾಗಿಯಾಗಿದ್ದರು. ಇದರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.