ಸಾಂದರ್ಭಿಕ ಚಿತ್ರ
ಬೆಂಗಳೂರು: ‘ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಿಂದಿನ ಸರ್ಕಾರಗಳು ₹8.50ಕೋಟಿ ಅನುದಾನ ಮಂಜೂರು ಮಾಡಿವೆ. ಅನುದಾನ ಬಳಕೆಗೆ ಲೆಕ್ಕಪತ್ರ ನೀಡದೇ ಇರುವ ಕಾರಣಕ್ಕೇ, ಬಸವರಾಜ ಬೊಮ್ಮಾಯಿ ಅವರ ಸರ್ಕಾರವೇ ಮಠಕ್ಕೆ ಮಂಜೂರಾಗಿದ್ದ ಅನುದಾನದಲ್ಲಿ ₹1.50 ಕೋಟಿ ತಡೆಹಿಡಿದಿತ್ತು’ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.
ನಿಗಮದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೊಮ್ಮಾಯಿ ಅವರ ಸರ್ಕಾರವೇ ₹1.50 ಕೋಟಿ ತಡೆಹಿಡಿದಿತ್ತು ಎಂಬುದನ್ನು ಪೂರ್ಣಾನಂದಪುರಿ ಸ್ವಾಮೀಜಿ ಮುಚ್ಚಿಡುತ್ತಿದ್ದಾರೆ. ಆ ಹಣ ಬಿಡುಗಡೆ ಮಾಡಲು ಸಚಿವ ಶಿವರಾಜ ತಂಗಡಗಿ ಅವರು ಕಮಿಷನ್ ಕೇಳುತ್ತಿದ್ದಾರೆ ಎಂದು ಸ್ವಾಮೀಜಿ ಸುಳ್ಳು–ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು.
‘ಯಡಿಯೂರಪ್ಪ ಅವರ ಮುಖ್ಯಮಂತ್ರಿ ಆಗಿದ್ದಾಗ ಮಠಕ್ಕೆ ₹2 ಕೋಟಿ ಅನುದಾನ ಘೋಷಿಸಿ, ಮಂಜೂರು ಮಾಡಿಸಿದ್ದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಒಮ್ಮೆ ₹3 ಕೋಟಿ ಘೋಷಿಸಿ, ಬಿಡುಗಡೆ ಮಾಡಿಸಿದ್ದರು. ಮತ್ತೆ ₹5 ಕೋಟಿ ಘೋಷಿಸಿದ್ದರು. ಆದರೆ, ಅನುದಾನ ಇಲ್ಲದ ಕಾರಣಕ್ಕೆ ₹3.50 ಕೋಟಿ ಬಿಡುಗಡೆ ಮಾಡುವಂತೆ ಸೂಚಿಸಿದ್ದರು’ ಎಂದು ಮಾಹಿತಿ ನೀಡಿದರು.
‘ಅದರಲ್ಲಿ ₹2 ಕೋಟಿ ಬಿಡುಗಡೆ ಆಗಿತ್ತು. ಅದರಂತೆ ಮಠಕ್ಕೆ ಒಟ್ಟು ₹7 ಕೋಟಿ ಬಿಡುಗಡೆಯಾಗಿತ್ತು. ಆದರೆ, ಅದ್ಯಾವುದಕ್ಕೂ ಸರಿಯಾದ ಲೆಕ್ಕಪತ್ರಗಳನ್ನು ಮಠ ನೀಡಿಲ್ಲ. ವಿದ್ಯಾರ್ಥಿನಿಲಯಕ್ಕೆ ₹3.50 ಕೋಟಿ ವೆಚ್ಚವಾಗುತ್ತದೆ ಎಂದು ಮಠವು ತಿಳಿಸಿತ್ತು. ನಿಯಮಗಳ ಪ್ರಕಾರ ಒಟ್ಟು ವೆಚ್ಚದ ಶೇ75ರಷ್ಟನ್ನು ಸರ್ಕಾರ ಒದಗಿಸಿದರೆ, ಉಳಿದಿದ್ದನ್ನು ಮಠವೇ ಭರಿಸಬೇಕು. ಹೀಗಾಗಿಯೂ ಮಠಕ್ಕೆ ₹1.50 ಕೋಟಿ ಬಿಡುಗಡೆ ಸಾಧ್ಯವಿಲ್ಲ ಎಂದು 2022ರಲ್ಲೇ ಆರ್ಥಿಕ ಇಲಾಖೆ ಸರ್ಕಾರಕ್ಕೆ ಟಿಪ್ಪಣಿ ಬರೆದಿತ್ತು’ ಎಂದು ವಿವರಿಸಿದರು.
‘ಈ ಎಲ್ಲ ಅಂಶವನ್ನು ಮುಚ್ಚಿಡುತ್ತಿರುವ ಸ್ವಾಮೀಜಿ ಅವರು ತಮ್ಮ ಪೂರ್ವಾಶ್ರಮದ ರಾಜಕೀಯದಲ್ಲಿ ಮಾಡಿದಂತೆಯೇ, ಈಗಲೂ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಸ್ವಾಮೀಜಿ ಆಗಿ ಇರಲು ಅವರಿಗೆ ಸಾಧ್ಯವಿಲ್ಲದೇ ಇದ್ದರೆ ಖಾವಿ ತ್ಯಜಿಸಿ, ಮತ್ತೆ ಖಾದಿ ತೊಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.