
ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಜನಜಾಗೃತಿ ಚಿಂತನ ಮಂಥನ ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತಕುಮಾರ್, ಅಶೋಕ ಹಾರನಹಳ್ಳಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅನಂತ ಹೆಗಡೆ ಅಶೀಸರ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ದೀರ್ಘಕಾಲದ ಚಿಂತನೆ ಇಲ್ಲದಿರುವ ಅಭಿವೃದ್ಧಿ ಯೋಜನೆಗಳು ಪತನಗೊಳ್ಳುತ್ತವೆ ಎಂದು ಸೋಂದಾ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಪಶ್ಚಿಮ ಘಟ್ಟದ ನದಿ ತಿರುವು ಯೋಜನೆಗಳು ‘ಬೇಡ್ತಿ–ಅಘನಾಶಿನಿ ಕಣ್ಣೀರು’ ಜನಜಾಗೃತಿ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಉತ್ತರ ಕನ್ನಡದ ಸ್ವಲ್ಪ ಭಾಗವನ್ನು ಹೊರತುಪಡಿಸಿ ಬಹುತೇಕ ಪ್ರದೇಶಗಳಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲ. ಕುಡಿಯುವ ನೀರಿನ ಕೊರತೆ ಇದೆ. ಈ ಬಗ್ಗೆ ಯಾರೂ ಚಿಂತನೆ ನಡೆಸುತ್ತಿಲ್ಲ. ಹಸಿರು ನೆಲದಿಂದ ಬರಡು ನೆಲಕ್ಕೆ ನೀರು ಒಯ್ಯುವ ಯೋಜನೆಯು ಬರಡು ನೆಲಕ್ಕೂ ನೀರು ಕೊಡದೇ ಹಸಿರು ನೆಲವನ್ನೂ ಬರಡು ಮಾಡಲಿದೆ. ಎತ್ತಿನಹೊಳೆ ಯೋಜನೆಯಂತೆ ಇದೂ ಆಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗಳ ವಿರುದ್ಧ ವೈಚಾರಿಕ ಚಿಂತನಾ ಹೋರಾಟ, ಕಾನೂನು ಹೋರಾಟ, ಜನಾಂದೋಲನ, ಅಧಿಕಾರಸ್ಥರಿಗೆ ಮನವರಿಕೆ ಮಾಡುವ ಕೆಲಸ ಹೀಗೆ ನಾಲ್ಕು ವಿಧದ ಹೋರಾಟ ನಡೆಸಲಾಗುತ್ತಿದೆ. ಜ.11ರಂದು ಶಿರಸಿಯಲ್ಲಿ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಪಾಲ್ಗೊಳ್ಳುವ ಮೂಲಕ ಈ ಯೋಜನೆ ಜಾರಿಯಾಗದಂತೆ ಧ್ವನಿ ಎತ್ತಬೇಕು’ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ₹ 15 ಸಾವಿರ ಕೋಟಿ, ಅಘನಾಶಿನಿ–ವೇದಾವತಿ ನದಿ ಜೋಡಣೆಗೆ ₹25 ಸಾವಿರ ಕೋಟಿ ನಿಗದಿಪಡಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಇದು ಅನಿಷ್ಠಾನಗೊಳ್ಳದಂತೆ ತಡೆಯಬೇಕು’ ಎಂದು ಹೇಳಿದರು.
ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ನ್ಯಾಯವಾದಿ ಅಶೋಕ ಹಾರನಹಳ್ಳಿ, ಪರಿಸರವಾದಿಗಳಾದ ಸುರೇಶ ಹೆಬ್ಳೀಕರ್, ಎ.ಕೆ. ವರ್ಮ, ಯು.ವಿ. ಸಿಂಗ್ ಮಾತನಾಡಿದರು.
ನಾವೇ ಪರಿಸರ ಅರಣ್ಯ ಸಂರಕ್ಷಣೆಯ ಕಾನೂನು ಮಾಡುತ್ತೇವೆ. ಅದನ್ನು ಉಲ್ಲಂಘಿಸುವ ಯೋಜನೆಗಳನ್ನೂ ನಾವೇ ರೂಪಿಸುತ್ತಿದ್ದೇವೆ. ಸೂಟ್‌ಕೇಸ್‌ಗೆ ಅನುಕೂಲ ಮಾಡಲು ಇದೆಲ್ಲ ನಡೆಯುತ್ತಿದೆ. ಉತ್ತರ ಕನ್ನಡದ ಧಾರಣಾ ಸಾಮರ್ಥ್ಯದ ಬಗ್ಗೆ ವರದಿ ನೀಡಿ ಹತ್ತು ವರ್ಷ ಕಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲ ಯೋಜನೆಗಳು ಸೂಕ್ಷ್ಮ ಪರಿಸರ ಪ್ರದೇಶದಲ್ಲಿಯೇ ಬರುತ್ತಿರುವುದು ಆಘಾತಕಾರಿ.
-ಟಿ.ವಿ. ರಾಮಚಂದ್ರ ಪರಿಸರ ವಿಜ್ಞಾನಿ ಐಐಎಸ್‌ಸಿ
ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಒಟ್ಟಿಗೆ ಮಾಡಲು ಸಾಧ್ಯವಿಲ್ಲ. ಆದರೆ ಅಭಿವೃದ್ಧಿಯೂ ಬೇಕು. ಪರಿಸರವೂ ಉಳಿಯಬೇಕು. ಅದಕ್ಕಾಗಿ ಸೂಕ್ಷ್ಮವಲ್ಲದ ಕೆಲವು ಪ್ರದೇಶಗಳನ್ನು ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಡಬೇಕು. ಇನ್ನು ಕೆಲವು ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಬಹುದು. ಇನ್ನು ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಬೇರೆ ಯೋಜನೆ ಹಮ್ಮಿಕೊಳ್ಳಬಾರದು.
-ಉಲ್ಲಾಸ ಕಾರಂತ ವನ್ಯಜೀವಿ ಶಾಸ್ತ್ರಜ್ಞ
ಪಶ್ಚಿಮ ಘಟ್ಟಗಳಲ್ಲಿ ಶೇ 20ರಷ್ಟು ಮಳೆ ಕಡಿಮೆಯಾದರೆ ಎಲ್ಲ ಜಲಾಶಯಗಳಲ್ಲಿ ಶೇ 40ರಷ್ಟು ನೀರಿನ ಕೊರತೆ ಉಂಟಾಗುತ್ತದೆ. ಪಶ್ಚಿಮ ಘಟ್ಟ ಇರುವ ಜಿಲ್ಲೆಗಳು ನಿತ್ಯ ನೀರಿರುತ್ತದೆ ಎಂಬುದು ಸತ್ಯವಲ್ಲ. ಅಲ್ಲೂ ಬರಡು ಜಾಸ್ತಿಯಾಗುತ್ತಿದೆ. ಇಂಥ ಯೋಜನೆಗಳು ಇನ್ನಷ್ಟು ಬರಡು ಭೂಮಿಯನ್ನು ಸೃಷ್ಟಿಸಲಿದೆ.
-ಶ್ರೀನಿವಾಸ ರೆಡ್ಡಿ ಜಲತಜ್ಞ
ಜೀವನದ ಗ್ಯಾರಂಟಿ ಮಕ್ಕಳ ಮೊಮ್ಮಕ್ಕಳ ಗ್ಯಾರಂಟಿ ಬೇಕಾ ಅಥವಾ ಸದ್ಯದ ಗ್ಯಾರಂಟಿಗಳು ಬೇಕಾ? ಎಂಬುದರ ಬಗ್ಗೆ ನಾವು ಉತ್ತರ ಕಂಡುಕೊಳ್ಳಬೇಕು. ದೇಶದ ರಾಜ್ಯದ ಅಭಿವೃದ್ಧಿಗೆ ಉತ್ತರ ಕನ್ನಡವು ಎಲ್ಲ ಕೊಡುಗೆಗಳನ್ನು ನೀಡಿದೆ. ಇನ್ನು ಅಲ್ಲಿಗೆ ಹೊಸ ಯೋಜನೆ ಬೇಡ. ಜಿಲ್ಲೆಗೆ ಬೇಕಾದ ಮೂಲಸೌಕರ್ಯ ಮಾತ್ರ ಕಲ್ಪಿಸಬೇಕು.
- ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡದ ಬಿಜೆಪಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.