ADVERTISEMENT

‘ಬಿಜೆಪಿಯಿಂದ ಅತಿಕಡಿಮೆ ಬೆಲೆಗೆ ವೋಟು ಖರೀದಿ’

ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:15 IST
Last Updated 12 ಫೆಬ್ರುವರಿ 2019, 20:15 IST

ಬೆಂಗಳೂರು: ‘ಕಿಸಾನ್‌ ಸನ್ಮಾನ್‌ ನಿಧಿ ಯೋಜನೆಯಿಂದ ವರ್ಷಕ್ಕೆ ₹ 6,000 ನೀಡುವುದಾಗಿ ಘೋಷಿಸಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರ ವೋಟುಗಳನ್ನು ಅತಿಕಡಿಮೆ ಬೆಲೆಗೆ ಖರೀದಿಸುತ್ತಿದೆ’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಈ ಯೋಜನೆ ರೂಪಿಸಿದ್ದು ರೈತರಿಗೆ ಮಾಡಿದ ಸನ್ಮಾನವಲ್ಲ, ಅಪಮಾನ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಸರ್ಕಾರ ಹೆಣೆದ ತಂತ್ರ’ ಎಂದು ದೂರಿದರು.

‘ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರಕಿಸಿ ಕೊಡುವ, ರೈತರನ್ನು ಸಾಲದಿಂದ ಸಂಪೂರ್ಣವಾಗಿ ಮುಕ್ತಿ ಮಾಡುವ ಮಸೂದೆಗಳು ಸಂಸತ್ತಿನಲ್ಲಿ ಕೊಳೆಯುತ್ತಿವೆ. ಆ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಮಾತನಾಡುತ್ತಿಲ್ಲ. ಆ ಎರಡು ಕಾನೂನುಗಳಿಗಾಗಿ ದೇಶದ 210 ರೈತ ಸಂಘಟನೆಗಳು ಒಗ್ಗೂಡಿವೆ. ಈ ಬಾರಿಯ ಚುನಾವಣೆ ಧರ್ಮಗಳ ಬದಲಾಗಿ ರೈತರು ಮತ್ತು ಯುವ ಜನರ ಸಂಕಷ್ಟಗಳ ಮೇಲೆ ಕೇಂದ್ರೀಕೃತವಾಗಲಿದೆ’ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ಭಾರತ್‌ ಕಿಸಾನ್‌ ಯೂನಿಯನ್‌ ಸಂಚಾಲಕ ಯದುವೀರ್‌ ಸಿಂಗ್, ‘ರೈತರ ಅನುಭವಿಸುತ್ತಿರುವ ಕಷ್ಟ–ನಷ್ಟಗಳ ಕುರಿತು ನಿಖರ ಅಂಕಿ–ಅಂಶಗಳನ್ನೇ ಕೇಂದ್ರ ಸರ್ಕಾರ ಬಹಿರಂಗಪಡಿಸುತ್ತಿಲ್ಲ. ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವ ಮಾರುಕಟ್ಟೆ ವ್ಯವಸ್ಥೆಯನ್ನೇ ರೂಪಿಸಿಲ್ಲ. ರೈತಪರ ಅಲ್ಲದವರನ್ನು ಅಧಿಕಾರದಿಂದ ಇಳಿಸಲು, ರೈತ ಸಂಘಟನೆಗಳು ರಣತಂತ್ರ ರೂಪಿಸಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.