ADVERTISEMENT

ಶ್ರವಣದೋಷ ಇರುವ ನೌಕರನ ವಿರುದ್ಧದ ಶಿಸ್ತು ಕ್ರಮ ರದ್ದು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 18:42 IST
Last Updated 23 ಮಾರ್ಚ್ 2021, 18:42 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಸಿಂಡಿಕೇಟ್‌ ಬ್ಯಾಂಕ್‌(ಈಗ ಕೆನರಾ ಬ್ಯಾಂಕ್‌) ನೌಕರರೊಬ್ಬರ ವಿರುದ್ಧ ಮಾನವ ಹಕ್ಕು ಉಲ್ಲಂಘಿಸಿ ಜರುಗಿಸಿದ್ದ ಶಿಸ್ತು ಕ್ರಮವನ್ನು ಹೈಕೋರ್ಟ್‌ ರದ್ದುಪಡಿಸಿದೆ.

‘ಶೇ 98ರಷ್ಟು ಶ್ರವಣದೋಷ ಇರುವ ವ್ಯಕ್ತಿ ತನ್ನ ವಿರುದ್ಧದ ಆರೋಪಗಳಿಗೆ ಸಮಜಾಯಿಷಿ ನೀಡಲು ಸಮಂಜಸವಾದ ಅವಕಾಶ ನೀಡದಿರುವ ಬ್ಯಾಂಕಿನ ಕ್ರಮ ಪ್ರಶ್ನಿಸುವಂತದ್ದು’ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರ ಎ.ಕೆ.ಸಿದ್ದಲಿಂಗಪ್ಪ ಅವರು 1976ರ ಅಕ್ಟೋಬರ್‌ನಲ್ಲಿ ಬ್ಯಾಂಕ್‌ಗೆ ಗುಮಾಸ್ತರಾಗಿ ಸೇರಿದ್ದರು. ಸ್ಟೇಷನರಿ ಖರೀದಿ ಅಕ್ರಮದ ವಿಷಯದಲ್ಲಿ 2012ರಲ್ಲಿ ಶೋಕಾಸ್ ನೋಟಿಸ್‌ ಅನ್ನು ಬ್ಯಾಂಕ್ ನೀಡಿತ್ತು. ಅಂಗವೈಕಲ್ಯದ ಕಾರಣಕ್ಕೆ ಸಮರ್ಥನೆ ನೀಡಲು ಸಹಾಯಕರನ್ನು ನೇಮಿಸಬೇಕೆಂದು ವಿಚಾರಣಾಧಿಕಾರಿ ಮುಂದೆ ಅವರು ಮನವಿ ಮಾಡಿದ್ದರು. ಅದಕ್ಕೆ ಅವಕಾಶ ನೀಡದ ವಿಚಾರಣಾಧಿಕಾರಿ, ಅರ್ಜಿದಾರ ತಪ್ಪಿತಸ್ಥ ಎಂದು ತೀರ್ಮಾನಿಸಿತು. ಬಳಿಕ ಅವರು ನಿವೃತ್ತರಾದರು.

ADVERTISEMENT

‘ಬ್ಯಾಂಕ್ ನಡೆಸಿರುವ ವಿಚಾರಣೆಯು ಬ್ಯಾಂಕ್‌ ನಿಯಮಗಳ ಉಲ್ಲಂಘನೆ ಅಲ್ಲ. ಆದರೆ, ಮಾನವ ಹಕ್ಕುಗಳ ಉಲ್ಲಂಘನೆ. ಅರ್ಜಿದಾರರನ್ನು ವಿಚಾರಣೆಯ ಉದ್ದಕ್ಕೂ ಸಾಮಾನ್ಯ ವ್ಯಕ್ತಿಯಂತೆ ಪರಿಗಣಿಸಲಾಗಿದೆ’ ಎಂದು ಪೀಠ ಹೇಳಿತು.

‘ಅರ್ಜಿದಾರರು ಶೇ 98ರಷ್ಟು ಶ್ರವಣದೋಷದಿಂದ ಬಳಲುತ್ತಿದ್ದಾರೆ ಎಂಬುದರಲ್ಲಿ ವಿವಾದ ಇಲ್ಲ. ಅವರನ್ನು ಸಾಮಾನ್ಯರಂತೆ ಪರಿಗಣಿಸಲು ಆಗುವುದಿಲ್ಲ’ ಎಂದು ತಿಳಿಸಿದ ಪೀಠ, ಶಿಸ್ತು ಕ್ರಮವನ್ನು ರದ್ದುಪಡಿಸಿತು. ನಿವೃತ್ತಿ ವೇತನ ಹಾಗೂ ಇನ್ನಿತರ ಸವಲತ್ತುಗಳನ್ನು ಪಡೆದುಕೊಳ್ಳಲು ಅವರು ಅರ್ಹರಿದ್ದಾರೆ. ಇನ್ನು ಎರಡು ತಿಂಗಳಲ್ಲಿ ಅವರಿಗೆ ಎಲ್ಲವನ್ನೂ ನೀಡಬೇಕು’ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.