ಸಾಮ್ರಾಟ್ ಕಕ್ಕೇರಿ
ಕಲಬುರಗಿ: ಅಮೆರಿಕದ ಕ್ಯಾಲಿಫೋರ್ನಿಯಾದ ಮಿಡಲ್ ಟೌನ್ ಸಮೀಪದ ಹಾರ್ಬಿನ್ ಸ್ಪ್ರಿಂಗ್ಸ್ ರಸ್ತೆಯಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯಾದಗಿರಿ ಜಿಲ್ಲೆಯ ಕಕ್ಕೇರಾ ಪಟ್ಟಣದ ತಬಲಾ ಕಲಾವಿದ ಸಾಮ್ರಾಟ್ ಕಕ್ಕೇರಿ (45) ಸಾವನ್ನಪ್ಪಿದ್ದಾರೆ.
ಕಳೆದ 15 ವರ್ಷಗಳಿಂದ ಅಮೆರಿಕದಲ್ಲಿಯೇ ನೆಲೆಸಿರುವ ಸಾಮ್ರಾಟ್ ಅವರು ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದರು. ಅಮೆರಿಕದ ಸ್ಥಳೀಯ ಕಾಲಮಾನ ಭಾನುವಾರ ಸಂಜೆಯ ಹೊತ್ತಿಗೆ ಸಾಮ್ರಾಟ್ ಕಕ್ಕೇರಿ ಅವರಿದ್ದ ಕಾರು ಹಾಗೂ ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿತು. ಇದರಿಂದಾಗಿ ಸಾಮ್ರಾಟ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಅವರೊಂದಿಗಿದ್ದ ಮತ್ತೊಬ್ಬರಿಗೆ ಗಾಯಗಳಾಗಿವೆ.
ಕಕ್ಕೇರಿಯ ಮೋಹನರಾವ್ ಅವರು ದಾವೂದ್ ಖಾನ್ ಸಾಬ್ ಅವರಿಂದ ಸಂಗೀತ ಕಲಿತಿದ್ದರು. ಸಾಮ್ರಾಟ್ ಅವರಿಗೆ ತಂದೆ ಮೋಹನರಾವ್ ಅವರೇ ಗುರುವಾಗಿದ್ದರು. ಎಂಬಿಎ ಪದವೀಧರರಾಗಿದ್ದ ಸಾಮ್ರಾಟ್ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ನಂತರ ಅಮೆರಿಕಕ್ಕೆ ತೆರಳಿ ಅಲ್ಲಿಯ ಮಹಿಳೆಯನ್ನೇ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿದೆ.
ಭಾರತದಿಂದ ಅಮೆರಿಕಕ್ಕೆ ತೆರಳುತ್ತಿದ್ದ ಕಲಾವಿದರಿಗೆ ಸಾಮ್ರಾಟ್ ತಬಲಾ ಸಾಥ್ ನೀಡುತ್ತಿದ್ದರು. ಇತ್ತೀಚೆಗೆ ಹಿಂದೂಸ್ತಾನಿ ಗಾಯಕ ಕೈವಲ್ಯಕುಮಾರ್ ಗುರವ ಅವರೊಂದಿಗೆ ಕಾರ್ಯಕ್ರಮ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.