ADVERTISEMENT

ಮಹಾರಾಷ್ಟ್ರದ ತಂತ್ರವನ್ನು ಗಂಭೀರವಾಗಿ ಪರಿಗಣಿಸಿ: ಸಿಎಂಗೆ ಪತ್ರ ಬರೆದ ನಾಗಾಭರಣ

ಪ್ರಜಾವಾಣಿ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 13:52 IST
Last Updated 27 ಜುಲೈ 2022, 13:52 IST
ಟಿ.ಎಸ್‌.ನಾಗಾಭರಣ
ಟಿ.ಎಸ್‌.ನಾಗಾಭರಣ   

ಬೆಳಗಾವಿ: ‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದಕ್ಕೆ ಒಳಪಟ್ಟ 865 ಹಳ್ಳಿಗಳ ಮರಾಠಿಗರನ್ನು ಸೆಳೆಯಲು ಮಹಾರಾಷ್ಟ್ರ ಸರ್ಕಾರ ಹೊಸ ತಂತ್ರ ರೂಪಿಸಿದೆ. ಕರ್ನಾಟಕ ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.‌

ಗಡಿ ವಿವಾದಕ್ಕೆ ಮಹಾರಾಷ್ಟ್ರ ಶೈಕ್ಷಣಿಕ ಅಸ್ತ್ರ ಬಳಸಿಕೊಳ್ಳಲು ಮುಂದಾಗಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಬುಧವಾರ ವಿಶೇಷ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ನಾಗಾಭರಣ ಮುಖ್ಯಮಂತ್ರಿ ಗಮನ ಸೆಳೆಯಲು ಮುಂದಾಗಿದ್ದಾರೆ.

‘ಬೆಳಗಾವಿ, ಬೀದರ್‌, ಕಲಬುರ್ಗಿ, ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 865 ಜನವಸತಿಗಳು ತಮಗೆ ಸೇರಬೇಕು ಎಂಬುದು ಮಹಾರಾಷ್ಟ್ರದ ವಾದ. ಇದನ್ನು ಪ್ರತಿಪಾದಿಸಲು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ. ಈಗ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯ ಆ ಹಳ್ಳಿಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಇದನ್ನೇ ಸಾಕ್ಷ್ಯಾಧಾರವಾಗಿ ರೂಪಿಸಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸಲು ಹುನ್ನಾರ ನಡೆಸಿದೆ. ಈ ಬೆಳವಣಿಗೆ ನಾಡು, ನುಡಿ ಮತ್ತು ಗಡಿಯ ಹಿತಾಸಕ್ತಿಗೆ ಮಾರಕವಾಗಿದೆ ಎಂಬ ಭಾವನೆ ಗಡಿ ಕನ್ನಡಿಗರಲ್ಲಿ ಮೂಡಿದೆ. ಹಾಗಾಗಿ, ಮಹಾರಾಷ್ಟ್ರದ ಕ್ರಮಕ್ಕೆ ಪ್ರತ್ಯುತ್ತರ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಗಡಿ ಕನ್ನಡ ಸಂಘಟನೆಗಳ ಸಲಹೆ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಗಡಿಯಲ್ಲಿ ಮೇಲಿಂದ ಮೇಲೆ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರಿನಲ್ಲಿರುವ ಗಡಿ ಸಂರಕ್ಷಣಾ ಆಯೋಗದ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಬೆಳಗಾವಿಯ ಕನ್ನಡ ಹಿರಿಯ ಹೋರಾಟಗಾರರನ್ನು ಅದಕ್ಕೆ ಅಧ್ಯಕ್ಷರಾಗಿ ನೇಮಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಎರಡು ದಿನಗಳಲ್ಲಿ ಭೇಟಿಯಾಗುವೆ: ಶಿವಾಜಿ ವಿಶ್ವವಿದ್ಯಾಲಯದ ವಿದ್ಯಮಾನದ ಬಗ್ಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಆತಂಕ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಪ್ರತಿನಿಧಿಗೆ ಕರೆ ಮಾಡಿ ಪ್ರತಿಕ್ರಿಯಿಸಿದ ಅವರು, ‘ಈ ವಿಷಯವನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಇದೇ ವಿಚಾರವಾಗಿ ಗಡಿ ಕನ್ನಡ ಸಂಘಟನೆಗಳೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ. ಎರಡು ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿಯಾಗುತ್ತೇನೆ. ಉಭಯ ರಾಜ್ಯಗಳ ಸಾಮರಸ್ಯ ದೃಷ್ಟಿಯಿಂದ ಈ ಆದೇಶ ಹಿಂಪಡೆಯುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯುವಂತೆಯೂ ಅವರನ್ನು ಕೋರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.