ADVERTISEMENT

18ರಂದು ತೀರ್ಥೋದ್ಭವ: ಕಾವೇರಿ ನಾಡು ಸಜ್ಜು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 20:00 IST
Last Updated 15 ಅಕ್ಟೋಬರ್ 2019, 20:00 IST
ಕಾವೇರಿ ನದಿಯ ಉಗಮ ಸ್ಥಳ ತಲಕಾವೇರಿ
ಕಾವೇರಿ ನದಿಯ ಉಗಮ ಸ್ಥಳ ತಲಕಾವೇರಿ   

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಾಲ್ಲೂಕಿನ ಭಾಗಮಂಡಲ ಸಮೀಪದ ತಲಕಾವೇರಿಯಲ್ಲಿ ನಡೆಯುವ ವಾರ್ಷಿಕ‘ತೀರ್ಥೋದ್ಭವ’ಕ್ಕೆ ಕೊಡಗು ಸಜ್ಜಾಗಿದೆ.

ಇದೇ 18ರಂದು ರಾತ್ರಿ 12.59ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದಾಳೆ.
ತೀರ್ಥೋದ್ಭವಕ್ಕೂ ಮೊದಲು ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಪೂಜೆಗಳು ಜರುಗಲಿವೆ. ಅ. 17ರಂದು ಸಂಜೆ ಮಹಾಮಂಗಳಾರತಿ ನಂತರ ಭಕ್ತರಿಗೆ ಕ್ಷೇತ್ರಕ್ಕೆ ಪ್ರವೇಶ ಸಿಗಲಿದೆ. ರಾತ್ರಿ 10ರಿಂದ ತೀರ್ಥೋದ್ಭವದ ತನಕ ಮಂತ್ರ ಪಠಣ ನಡೆಯಲಿದೆ. ಭಾಗಮಂಡಲದ ತ್ರಿವೇಣಿ ಸಂಗಮದಿಂದ ತಲಕಾವೇರಿ ಕ್ಷೇತ್ರದ 8 ಕಿ.ಮೀ ದೂರಕ್ಕೂ ಟ್ಯೂಬ್‌ ಲೈಟ್‌ ಹಾಗೂ ತೀರ್ಥ ಕುಂಡಿಕೆ ಸುತ್ತಲೂ ಬೃಹತ್‌ ಎಲ್‌ಇಡಿ ಬಲ್ಬ್ ಅಳವಡಿಸಲಾಗಿದೆ.

ಪವಿತ್ರ ತೀರ್ಥ ಕೊಂಡೊಯ್ಯಲು ಪ್ಲಾಸ್ಟಿಕ್ ಬಾಟಲಿ ಹಿಡಿದು ಬರುವ ಭಕ್ತರಿಗೆ ಈ ಬಾರಿ ತೀರ್ಥ ನೀಡುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ. ತೀರ್ಥೋದ್ಭವದ ನಂತರ ಭಾಗಮಂಡಲದಲ್ಲಿ ಒಂದು ತಿಂಗಳು ಕಾವೇರಿ ಜಾತ್ರೆ ನಡೆಯಲಿದೆ. ಸಂಗಮದಲ್ಲಿ ವರ್ಷವಿಡೀ ಭಕ್ತರು ಪವಿತ್ರ ಸ್ನಾನ ಮಾಡುತ್ತಾರೆ. ಜಾತ್ರೆಯ ವೇಳೆ ಸಂಗಮದಲ್ಲಿ ಮಿಂದೇಳುವವರ ಸಂಖ್ಯೆ ಅಧಿಕ ಎನ್ನುತ್ತಾರೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು.

ADVERTISEMENT

ಭಕ್ತರ ಸಂಖ್ಯೆ ಇಳಿಮುಖ ಸಾಧ್ಯತೆ

ಬೆಳಗಿನ ಜಾವ 12.59ಕ್ಕೆ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಭಕ್ತರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯಿದೆ. ಮಧ್ಯಾಹ್ನ ಇಲ್ಲವೇ ಸಂಜೆಯಾಗಿದ್ದರೆ, ಹೊರ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬರುತ್ತಿದ್ದರು.

ಭೂಕುಸಿತ ಹಾಗೂ ಪ್ರವಾಹದ ನಂತರ ಕೊಡಗಿನಲ್ಲಿ ಪ್ರವಾಸೋದ್ಯಮ ಚೇತರಿಸಿಕೊಂಡಿಲ್ಲ. ಪ್ರತಿವರ್ಷವೂ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಬರುತ್ತಿದ್ದ ತಮಿಳುನಾಡು, ಕೇರಳ ರಾಜ್ಯದ ಭಕ್ತರ ಸಂಖ್ಯೆಯೂ ಈ ವರ್ಷ ಇಳಿಮುಖವಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.