ADVERTISEMENT

ತುಮಕೂರು ಎಪಿಎಂಸಿ: ಹುಣಸೆಹಣ್ಣಿನ ಬೆಲೆ ತೀವ್ರ ಕುಸಿತ

ಕ್ವಿಂಟಲ್‌ಗೆ ₹5 ಸಾವಿರದಿಂದ ₹7 ಸಾವಿರದವರೆಗೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 19:18 IST
Last Updated 16 ಮೇ 2022, 19:18 IST
ಮೊಳಕಾಲ್ಮುರು ತಾಲ್ಲೂಕಿನ ಗ್ರಾಮವೊಂದಲ್ಲಿ ಹುಣಸೆಹಣ್ಣು ಬಿಡಿಸುತ್ತಿರುವ ಕಾರ್ಮಿಕರು.
ಮೊಳಕಾಲ್ಮುರು ತಾಲ್ಲೂಕಿನ ಗ್ರಾಮವೊಂದಲ್ಲಿ ಹುಣಸೆಹಣ್ಣು ಬಿಡಿಸುತ್ತಿರುವ ಕಾರ್ಮಿಕರು.   

ತುಮಕೂರು: ರಾಜ್ಯದ ಪ್ರಮುಖ ಮಾರುಕಟ್ಟೆಯಾದ ತುಮಕೂರು ಎಪಿಎಂಸಿಯಲ್ಲಿ ಹುಣಸೆ ಹಣ್ಣಿನ ಬೆಲೆ ಕ್ವಿಂಟಲ್‌ಗೆ ₹5 ಸಾವಿರದಿಂದ ₹7 ಸಾವಿರದವರೆಗೆ ಕುಸಿದಿದೆ.

ದಕ್ಷಿಣ ಭಾರತದ ದೊಡ್ಡ ಮಾರುಕಟ್ಟೆ ಹಿಂದೂಪುರ ಹಾಗೂ ತಮಿಳುನಾಡಿನ ವರ್ತಕರು ಹುಣಸೆ ಖರೀದಿಗೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಬೇಡಿಕೆ ಕುಸಿಯುತ್ತಿದ್ದು, ಸ್ಥಳೀಯ ವರ್ತಕರು ಅತಿ ಕಡಿಮೆ ಬೆಲೆಗೆ ಕೊಳ್ಳುತ್ತಿದ್ದಾರೆ.

ಮಾರ್ಚ್ ಮಧ್ಯಭಾಗದಿಂದಲೇ ಹಣ್ಣು ಮಾರುಕಟ್ಟೆಗೆ ಬಂದಿದ್ದು, ಪ್ರಸ್ತುತ ಶೇ 70ರಷ್ಟು ಹಣ್ಣು ಮಾರಾಟವಾಗಿದೆ. ಇನ್ನು ಶೇ 30ರಷ್ಟು ಮಾತ್ರ ಮಾರಾಟವಾಗಬೇಕಿದೆ. ಆರಂಭದಲ್ಲಿ ಗುಣಮಟ್ಟದ ಹಣ್ಣಿಗೆ ಕ್ವಿಂಟಲ್ ₹13 ಸಾವಿರದಿಂದ ₹16 ಸಾವಿರದವರೆಗೂ ಇತ್ತು. ಸಾಧಾರಣ ಗುಣಮಟ್ಟದ ಹಣ್ಣಿಗೆ ₹6 ಸಾವಿರದಿಂದ ₹8 ಸಾವಿರದ ವರೆಗೂ ಇತ್ತು. ಈಗಲೂ ಗುಣಮಟ್ಟದ ಆಧಾರದ ಮೇಲೆ ಬೆಲೆ ಸಿಗುತ್ತಿದ್ದು, ಕ್ವಿಂಟಲ್‌ಗೆ ₹14 ಸಾವಿರದಿಂದ ₹16 ಸಾವಿರದವರೆಗೂ ಇದೆ. ಗುಣಮಟ್ಟ ಇಲ್ಲದ ಹಣ್ಣಿನ ಬೆಲೆ ತೀವ್ರವಾಗಿ ಇಳಿಕೆಯಾಗಿದೆ.

ADVERTISEMENT

ಕೋವಿಡ್ ಸಮಯದಲ್ಲಿ ದಾಸ್ತಾನು ಮಾಡಿದ್ದ ಹುಣಸೆ ಇನ್ನೂ ಕರಗಿಲ್ಲ.ಈ ಬಾರಿಯೂ ಸಾಕಷ್ಟು ದಾಸ್ತಾನು ಮಾಡ ಲಾಗಿದೆ. ಹೊರ ರಾಜ್ಯ ಹಾಗೂ ವಿದೇಶದಲ್ಲಿ ಬೇಡಿಕೆ ಇಲ್ಲ. ಮುಂದಿನ ದಿನಗಳಲ್ಲಿ ಧಾರಣೆ ಮತ್ತಷ್ಟು ಕುಸಿಯಬಹುದು ಎಂಬ ಆತಂಕದಿಂದ ಖರೀದಿಗೆ ಮುಂದಾಗುತ್ತಿಲ್ಲ ಎನ್ನುತ್ತಾರೆ ವರ್ತಕ ಮಹೇಂದರ್.

ಹುಣಸೆ–ಬೆಳೆ ಕಡಿಮೆ(ಮೈಸೂರುವರದಿ): ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಹುಣ ಸೆಹಣ್ಣಿನ ಕನಿಷ್ಠ ಧಾರಣೆ ಕ್ವಿಂಟಲ್‌ಗೆ ₹ 2,780, ಗರಿಷ್ಠ ಧಾರಣೆ ₹ 12,555 ಇದೆ. ಮೇ 7ರಿಂದ 11ರವರೆಗೂ ಕನಿಷ್ಠ ಧಾರಣೆ ₹ 1,600ರಿಂದ ₹ 1,800ಕ್ಕೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.