ಬೆಂಗಳೂರು: ಗ್ರಾಮಕ್ಕೆ ಹೊಂದಿಕೊಂಡಿರುವ ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮ ಪಟ್ಟಿಯಿಂದ ಕೈಬಿಡಬಾರದು. ಬಿಟ್ಟು ಹೋಗಿದ್ದರೆ ತಕ್ಷಣವೇ ಮರು ಸೇರ್ಪಡೆ ಮಾಡಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಅವರು, ಅಧಿಕಾರಿಗಳ ಕಣ್ತಪ್ಪಿನಿಂದ ಪಟ್ಟಿಯಿಂದ ಬಿಟ್ಟುಹೋಗಿರುವ ಹಾಡಿ, ತಾಂಡಾ, ಗೊಲ್ಲರ ಹಟ್ಟಿಗಳನ್ನು ಗುರುತಿಸಿ, ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಬೇಕು. ಅಧಿಸೂಚನೆ ಹೊರಡಿಸಬೇಕು ಎಂದರು.
ಹಟ್ಟಿ, ತಾಂಡಾಗಳು ಗ್ರಾಮದ ಜತೆ ಹೊಂದಿಕೊಂಡಿದ್ದರೆ ಅವುಗಳಿಗೆ ಕಂದಾಯ ಗ್ರಾಮ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬ 2016ರ ಸುತ್ತೋಲೆ ಬದಲಿಸಿ, 2017 ಮತ್ತು 2019ರಲ್ಲಿ ಹೊಸ ಸುತ್ತೋಲೆ ಹೊರಡಿಸಲಾಗಿದೆ. ಆ ಸುತ್ತೋಲೆ ಪ್ರಕಾರ ಗ್ರಾಮದ ಜತೆ ಹೊಂದಿಕೊಂಡಿದ್ದರೂ ತಾಂಡಾ, ಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಅವಕಾಶ ನೀಡಲಾಗಿದೆ. ಇಂತಹ ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಅಧಿಕಾರಿಗಳು ಮಾಡುವ ತಪ್ಪಿಗೆ ಸದನದಲ್ಲಿ ಬಂಜಾರ ಮತ್ತು ಗೊಲ್ಲ ಸಮಾಜದ ಶಾಸಕರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದರು.
ಕಳೆದ ತಿಂಗಳು 1.11 ಲಕ್ಷ ಹಾಡಿ, ಹಟ್ಟಿ, ತಾಂಡಾ ನಿವಾಸಿಗಳಿಗೆ ಸರ್ಕಾರ ಹಕ್ಕುಪತ್ರ ನೀಡಿದೆ. ಈ ಕೆಲಸವನ್ನು ಸಂಪೂರ್ಣವಾಗಿ ಮುಗಿಸಬೇಕು ಮುಂದಿನ ವರ್ಷದೊಳಗೆ ಕನಿಷ್ಠ ಇನ್ನೂ ಒಂದು ಲಕ್ಷ ಜನರಿಗೆ ಹಕ್ಕುಪತ್ರ ನೀಡಬೇಕು. ತಾಂಡಾ ನಿಗಮ ಹಾಗೂ ಜಲ ಜೀವನ್ ಮಿಷನ್‌ನಿಂದ ಪಟ್ಟಿ ತರಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಹಲವು ವರ್ಷಗಳಿಂದ ಕಚೇರಿಗಳಿಲ್ಲದೆ ಪರಿತಪಿಸುತ್ತಿದ್ದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಗ್ರಾಮ ಪಂಚಾಯತ್ ಕಾರ್ಯಾಲಯಗಳಲ್ಲೇ ನೂತನ ಕಚೇರಿ ನೀಡಬೇಕು. ಪ್ರಸ್ತುತ 5,944 ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ 15 ದಿನಗಳಲ್ಲಿ ಕನಿಷ್ಠ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ವ್ಯವಸ್ಥೆ ಮಾಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.