ADVERTISEMENT

ಭುಗಿಲೆದ್ದ ಬೆಂಕಿ: ಮೂರು ಮನೆಗೆ ಹಾನಿ

ಉರುಳಿ ಬಿದ್ದ ಪೆಟ್ರೋಲ್‌ ಟ್ಯಾಂಕರ್‌ l ಚಾಲಕನಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 2:14 IST
Last Updated 20 ಜೂನ್ 2018, 2:14 IST
ಗಿರಿಯಾಪುರ ಗ್ರಾಮದ ತಿರುವಿನಲ್ಲಿ ಮಂಗಳವಾರ ಪೆಟ್ರೋಲ್ ಟ್ಯಾಂಕರ್ ಮಗುಚಿ ಬೆಂಕಿ ಹತ್ತಿಕೊಂಡಿರುವುದು
ಗಿರಿಯಾಪುರ ಗ್ರಾಮದ ತಿರುವಿನಲ್ಲಿ ಮಂಗಳವಾರ ಪೆಟ್ರೋಲ್ ಟ್ಯಾಂಕರ್ ಮಗುಚಿ ಬೆಂಕಿ ಹತ್ತಿಕೊಂಡಿರುವುದು   

ಬೀರೂರು: ಕಡೂರು ತಾಲ್ಲೂಕಿನ ಗಿರಿಯಾಪುರ ಗ್ರಾಮದ ಚಿಕ್ಕನಲ್ಲೂರು ತಿರುವಿನಲ್ಲಿ ಪೆಟ್ರೋಲ್‌ ಸಾಗಿಸುತ್ತಿದ್ದ ಟ್ಯಾಂಕರ್‌ ಮಂಗಳವಾರ ಮಗುಚಿ ಬಿದ್ದು ಅದಕ್ಕೆ ಬೆಂಕಿ ಹತ್ತಿಕೊಂಡಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಮೀಪದ ಮೂರು ಮನೆಗಳಿಗೆ ಭಾರಿ ಹಾನಿ ಸಂಭವಿಸಿದೆ.

ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದ ಎದುರಿನ ತಿರುವಿನಲ್ಲಿ ಮಂಗಳವಾರ ಮಧ್ಯಾಹ್ನ 2.30ರ ಹೊತ್ತಿನಲ್ಲಿ ವೇಗವಾಗಿ ಬಂದ ಟ್ಯಾಂಕರ್ ರಸ್ತೆಯ ಎಡಬದಿಗೆ ಮಗುಚಿ ಬಿದ್ದಿತು.

ತಕ್ಷಣವೇ ಅದಕ್ಕೆ ಬೆಂಕಿ ಹತ್ತಿಕೊಂಡಿತು. ಇದರಿಂದ ರಸ್ತೆಯ ಮಗ್ಗುಲಿನಲ್ಲಿಯೇ ಇರುವ ಗುರುಶಾಂತಪ್ಪ, ಮೃತ್ಯುಂಜಯಪ್ಪ ಅವರ ಮನೆಗೆ ಬೆಂಕಿ ಆವರಿಸಿತು. ಪಕ್ಕದ ಉಮಾಮಹೇಶ್ವರಪ್ಪ ಅವರ ಮನೆಗೂ ಭಾಗಶಃ ಹಾನಿಯಾಗಿದೆ. ಘಟನೆ ನಡೆದ ತಕ್ಷಣ ಮನೆಯಲ್ಲಿದ್ದವರು ಗ್ರಾಮಸ್ಥರ ನೆರವಿನಿಂದ ಮನೆಯ ಹಿಂಬಾಗಿಲಿನಿಂದ ಹೊರ ಬಂದಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ.

ADVERTISEMENT

ಕಡೂರು, ತರೀಕೆರೆ, ಚಿಕ್ಕಮಗಳೂರು ಮತ್ತು ಹೊಸದುರ್ಗಗಳ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ಹತೋಟಿಗೆ ತಂದರು.

ಶಿವಮೊಗ್ಗದಿಂದ ತಂದ ಎಎಫ್‍ಎಫ್‍ಎಫ್ ಫೋಮ್ ನೆರವಿನಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಆದರೆ, ಆಗಲೇ ಟ್ಯಾಂಕರ್ ಸಂಪೂರ್ಣ ಭಸ್ಮವಾಗಿತ್ತು.

ದಾವಣಗೆರೆಯವರಾದ ಚಾಲಕ ದಾದಾಪೀರ್ ಶೇ 80ರಷ್ಟು ಬೆಂದು ಹೋಗಿದ್ದು, ಗುರುತು ಸಿಗದಷ್ಟು ದೇಹ ಸುಟ್ಟುಹೋಗಿದೆ. ಅವರಿಗೆ ಕಡೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.