ADVERTISEMENT

ಸಂತ್ರಸ್ತರಿಗೆ ಮಿಡಿದ ಶೈಕ್ಷಣಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 18:22 IST
Last Updated 16 ನವೆಂಬರ್ 2018, 18:22 IST
ಉತ್ತಮ ಶಿಕ್ಷಕರಿಗೆ ‘ಮಾತೆ ಸಾವಿತ್ರಿಬಾಯಿ ಪುಲೆ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಪ್ರಜಾವಾಣಿ ಚಿತ್ರ
ಉತ್ತಮ ಶಿಕ್ಷಕರಿಗೆ ‘ಮಾತೆ ಸಾವಿತ್ರಿಬಾಯಿ ಪುಲೆ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶೈಕ್ಷಣಿಕ ಸಮ್ಮೇಳನ’ವು ಉತ್ತಮ ಶಿಕ್ಷಕರಿಗೆ ಸನ್ಮಾನ ಮಾಡಲು, ವಿಕೋಪದಿಂದ ಸಂತ್ರಸ್ತರಾದ ಕೊಡಗಿನ ಜನರಿಗೆ ನೆರವಿನ ಹಸ್ತ ನೀಡಲು ವೇದಿಕೆಯಾಯಿತು.

43 ಉತ್ತಮ ಶಿಕ್ಷಕರಿಗೆ ‘ಮಾತೆ ಸಾವಿತ್ರಿಬಾಯಿ ಪುಲೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊಡಗನ್ನು ಕಟ್ಟಲು ಮುಖ್ಯಮಂತ್ರಿ ಪರಿಹಾರ ನಿಧಿಗೆ 2.16 ಲಕ್ಷ ಶಿಕ್ಷಕರು ತಮ್ಮ ಒಂದು ದಿನದ ವೇತನವನ್ನು ನೀಡಿದ್ದರು. ಅದರಒಟ್ಟು ಮೊತ್ತ ₹ 24.97 ಕೋಟಿಯನ್ನು ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿದರು.

ADVERTISEMENT

ಶಿಕ್ಷಕರ ಸಮೂಹವು ಮುಖ್ಯಮಂತ್ರಿಗೆ ಬೆಳ್ಳಿ ಗದೆ ನೀಡಿ, ಕಿರೀಟವನ್ನು ತೊಡಿಸಿ ಸನ್ಮಾನ ಮಾಡಿತು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಈಗಿರುವ ಶಿಕ್ಷಕರ ವರ್ಗಾವಣೆ ಕಾಯ್ದೆ ಉತ್ತಮವಾಗಿದೆ. ಅದರಲ್ಲಿ ಆಗಬೇಕಿರುವ ಅಲ್ಪ ಬದಲಾವಣೆಗಳು ಸರ್ಕಾರದ ಗಮನಕ್ಕೆ ಬಂದಿವೆ. ಅವುಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

‘ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳನ್ನು ನೇರವಾಗಿ ಖಾಸಗಿ ಶಾಲೆಗಳಿಗೆ ಸೇರಿಸುವುದು ತಪ್ಪು. ಅವರನ್ನು ಮೊದಲು ಸರ್ಕಾರಿ ಶಾಲೆಗೆ, ಇಲ್ಲದಿದ್ದರೆ ಅನುದಾನಿತ ಶಾಲೆಗೆ, ಅದಿಲ್ಲದಿದ್ದರೆ ಅನುದಾನ ರಹಿತ ಕನ್ನಡ ಶಾಲೆಗೆ ಸೇರಿಸಬೇಕು. ಇದರಿಂದ ಭಾಷೆ ಮತ್ತು ಸರ್ಕಾರಿ ಶಾಲೆಗಳು ಉಳಿಯುತ್ತವೆ’ ಎಂದು ಸಲಹೆ ನೀಡಿದರು.

‘ಆರ್‌ಟಿಇಯಡಿ ಸರ್ಕಾರೇತರ ಶಾಲೆಗಳಿಗೆ ದಾಖಲಾದ 2.80 ಲಕ್ಷ ಮಕ್ಕಳ ಶುಲ್ಕ ಕಟ್ಟಲು ₹ 1,000 ಕೋಟಿ ಖರ್ಚು ಮಾಡುವುದು ಯಾವ ನ್ಯಾಯ. ಇದೇ ಸ್ಥಿತಿ ಮುಂದುವರೆದರೆ 20 ವರ್ಷಗಳಲ್ಲಿ ಶೇ 75ರಷ್ಟು ಸರ್ಕಾರಿ ಶಾಲೆಗಳು ಮುಚ್ಚುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.
*

ಮುಖ್ಯಮಂತ್ರಿಗೆ ಗದರಿದ ಸಭಾಪತಿ
ಬಸವರಾಜ ಹೊರಟ್ಟಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ, ಮುಖ್ಯಮಂತ್ರಿ ಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿಗಳಿಗೆ ಸನ್ಮಾನ ಮಾಡುತ್ತಿದ್ದರು. ಇದರಿಂದ ವೇದಿಕೆಯಲ್ಲಿ ಸ್ವಲ್ಪ ಗದ್ದಲ ಉಂಟಾಯಿತು. ಸಭಿಕರ ಗಮನವೂ ಮುಖ್ಯಮಂತ್ರಿ ಕಡೆ ಇತ್ತು. ಇದರಿಂದ ಕ್ಷಣಕಾಲ ಸಿಟ್ಟಿಗೆದ್ದ ಸಭಾಪತಿ ‘ಈ ಸನ್ಮಾನವನ್ನು ಆಮೇಲೆ ನಡೆಸಿದರೆ ಆಗುವುದಿಲ್ಲವೆ? ನೀವು, ಸಂಘದವರು ಇನ್ಯಾವಾಗ ಶಿಸ್ತು ಕಲಿಯುತ್ತೀರಾ’ ಎಂದು ಗದರಿದರು. ಒಂದಿಬ್ಬರಿಗೆ ಸನ್ಮಾನ ಮಾಡಿ ಮುಖ್ಯಮಂತ್ರಿ ಕುಳಿತರು.

ಹೊರಟ್ಟಿ ಅವರ ಭಾಷಣ ಮುಂದುವರೆಯುತ್ತಲೇ ಇತ್ತು. ಆಗ ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿಯೊಬ್ಬರು ಅವರ ಮುಂದೆ ಚೀಟಿಯೊಂದನ್ನು ತಂದಿಟ್ಟರು. ಆ ಬಳಿಕ, ಒಂದೆರಡು ಮಾತನಾಡಿ, ಭಾಷಣ ಮುಗಿಸಿದರು.

**
ವರ್ಗಾವಣೆಯ ಗೊಂದಲಗಳಿಂದ ಶಿಕ್ಷಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅದರಿಂದ ಬೋಧನೆ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಈ ಬಾರಿಯ ವಾರ್ಷಿಕ ಪರೀಕ್ಷೆಗಳಲ್ಲಿ ಮಕ್ಕಳಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲು ಆಗದು.
- ಮರಿತಿಬ್ಬೇಗೌಡ, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.